ಬ್ಯಾಡಗಿ: ಮಹಿಳಾ ಸಬಲೀಕರಣ ಕೇವಲ ಭಾಷಣದ ವಸ್ತುವಾಗಬಾರದು, ದೇಶದಲ್ಲಿ 1.92 ಕೋಟಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಂದಿಗೂ ಮಹಿಳೆಯರ ಶ್ರಮದಿಂದ ನಡೆಯುತ್ತಿವೆ, ಮಹಿಳಾ ಕಾರ್ಮಿಕರ ಶ್ರಮದ ಮೇಲೆ ದೇಶದ ಶೇ.41ರಷ್ಟು ಕುಟುಂಬಗಳು ಆರ್ಥಿಕ ಭದ್ರತೆ ಪಡೆದುಕೊಂಡಿವೆ, ಹೀಗಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ಕುಟುಂಬದ ಒಳಗೂ ಹೊರಗೂ ಆಕೆಯ ಹೋರಾಟ ನಿಂತಿಲ್ಲ ಎಂದು ಎಸ್‌ಡಿಎಂ ಧಾರವಾಡದ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಖೇದ ವ್ಯಕ್ತಪಡಿಸಿದರು. ಪಟ್ಟಣದ ಕಸಾಪ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕಾಗಿ ಮಹಿಳೆಯನ್ನು ಸಿದ್ಧಪಡಿಸಲಿದ್ದೇವೆ: ಮಹಿಳಾ ಸಾಕ್ಷರತೆ 2025ರಲ್ಲಿ ಸರಿ ಸುಮಾರು 70.3% ತಲುಪಿದೆ. ಅದರಲ್ಲೂ ಯುವತಿಯರ ಸಾಕ್ಷರತೆ ಶೇ.96ರಷ್ಟಿದೆ. ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಶೇ.78ಕ್ಕೆ ಏರಿದೆ. ಮಾತೋಶ್ರೀ ಹೇಮಾವತಿ ಹೆಗ್ಗಡೆ ಅವರ ಆಶಯದಂತೆ ಜ್ಞಾನ ವಿಕಾಸ ಕಾರ್ಯಕ್ರಮ ಆರಂಭಿಸಿದ್ದು ನಿರ್ಗತಿಕ ಮಹಿಳೆಯರಿಗೆ ಮಾಸಾಶನ, ವಾತ್ಸಲ್ಯ ಕಿಟ್, ವಾತ್ಸಲ್ಯ ಮನೆ, ವಾತ್ಸಲ್ಯ ವಿದ್ಯಾನಿಧಿ ನೀಡಿ ಆಸರೆ ಇಲ್ಲದವರ ಬಾಳಿಗೆ ಬೆಳಕು ನೀಡಲಾಗುತ್ತಿದೆ ಎಂದರು.ಎಚ್ಚರಗೊಳ್ಳದಿದ್ದರೇ ನಿರ್ನಾಮ: ಅತಿಥಿಗಳಾಗಿದ್ದ ಪಿಎಸ್ಐ ಭಾರತಿ ಕುರಿ ಮಾತನಾಡಿ, ದೌರ್ಜನ್ಯಗಳ ವಿರುದ್ಧ ಅಂತಿಮ ಕ್ಷಣದವರೆಗೂ ಹೋರಾಡಬೇಕು. ಬಾಲ್ಯವಿವಾಹ, ಪೋಕ್ಸೋದಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಅಂದಾಗ ಮಾತ್ರ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು. ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಬಿ.ಕೆ. ಸುರೇಖಾ, ನ್ಯಾಯವಾದಿ ಭಾರತಿ ಕುಲಕರ್ಣಿ, ಸಿಡಿಪಿಓ ಕಚೇರಿ ಸುಮಂಗಲಾ ಐಬಕ್ಕನವರ, ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಜ್ಞಾನವಿಕಾಸ ಯೋಜನಾಧಿಕಾರಿ ಸುಧಾ, ಯೋಜನಾಧಿಕಾರಿ ಜಿ. ರಘುಪತಿಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ, ಮೇಲ್ವಿಚಾರಕ ಗಣೇಶ್ ನಾಯ್ಕ, ನೇತ್ರಾವತಿ ಗೌಡ ಸೇರಿದಂತೆ ಇನ್ನಿತರರಿದ್ದರು.