ಕನ್ನಡಪ್ರಭ ವಾರ್ತೆ ಮಂಗಳೂರು
ಮತ ಯುದ್ಧಕ್ಕೆ ಹೊರಟ ಅಭ್ಯರ್ಥಿಗೆ ಮಹಿಳೆಯರು ಆರತಿ ಎತ್ತಿ, ಹಣೆಗೆ ತಿಲಕ ಇರಿಸಿ, ಹಾರ ಹಾಕಿ ಕೈಗೆ ಒಂದಷ್ಟು ಇಡುಗಂಟು ನೀಡಿ ಹರಸಿದ ವಿದ್ಯಮಾನಕ್ಕೆ ಮಂಗಳೂರಿನ ದ.ಕ. ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿ ಬುಧವಾರ ಸಾಕ್ಷಿಯಾಯಿತು.ಸಮಾಜದ ವಿವಿಧ ವರ್ಗದ ಮಹಿಳೆಯರು ಸೇರಿ ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ನಾಮಪತ್ರ ಸಲ್ಲಿಕೆ ಹಾಗೂ ಚುನಾವಣಾ ಪ್ರಚಾರ ಭರಾಟೆಗೆ ಈ ವಿಶೇಷ ರೀತಿಯಲ್ಲಿ ಕಳುಹಿಸಿಕೊಟ್ಟರು.
ಈ ಮಹಿಳೆಯರೇ ಸ್ವಯಂ ಆಗಿ ಚುನಾವಣಾ ವೆಚ್ಚಕ್ಕೆ ಕಿಂಚಿತ್ ಮೊತ್ತ ನೀಡಿ ಹರಸಿದರು.ಬಿಜೆಪಿ ಜಿಲ್ಲಾ ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಯೋಧನೊಬ್ಬನನ್ನು ಸೇನೆಯಿಂದ ಯುದ್ಧಕ್ಕೆ ಕಳುಹಿಸುವಾಗ ಪಾಲಿಸುವ ಸಂಪ್ರದಾಯದಂತೆ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಮಹಿಳೆಯರು ಲೋಕಸಭಾ ಸಮರದಲ್ಲಿ ಗೆದ್ದು ವಿಜಯಶಾಲಿಯಾಗಿ ಬನ್ನಿ, ಪ್ರಜಾತಂತ್ರದಲ್ಲೂ ಸೈನಿಕನಂತೆ ಮೌಲ್ಯಗಳ ರಕ್ಷಣೆಗೆ ಟೊಂಕಕಟ್ಟುವಂತೆ ಹರಸಿ ಕಳುಹಿಸಿದ ಕ್ಷಣ ಮನನೀಯ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ನಿವೃತ್ತ ಯೋಧರೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ದೇಶರಕ್ಷಕರನ್ನು ಗೌರವಿಸಿದೆ ಎಂದರು.
ಅಭ್ಯರ್ಥಿ ಕ್ಯಾಪ್ಟನ್. ಬ್ರಿಜೇಶ್ ಚೌಟ ಮಾತನಾಡಿ, ಚುನಾವಣಾ ಯುದ್ಧಕ್ಕಾಗಿ ತಾಯಂದಿರು ಇಡುಗಂಟು ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಶಿವಾಜಿ ಮಹಾರಾಜರ ಸ್ಮರಣೆಯ ದಿನವೇ ನನಗೆ ಇಂತಹ ಸೌಭಾಗ್ಯ ಲಭಿಸಿದೆ. ಕರಾವಳಿ ದೇವಿಶಕ್ತಿಯ ನಾಡಾಗಿದ್ದು, ಮುಂದಿನ ಚುನಾವಣಾ ಯುದ್ಧಕ್ಕೆ ಎಲ್ಲರ ಆಶೀರ್ವಾದ ಸಿಕ್ಕಿದೆ. ಹಿಂದುತ್ವದ ಭದ್ರಕೋಟೆಯಾಗಿಸುವ ಭಾದ್ಯತೆ ನಮ್ಮ ಮೇಲಿದೆ ಎಂದರು.ಮಹಿಳೆಯರ ಪರವಾಗಿ ರಜನಿ ಶೆಟ್ಟಿ ಮಾತನಾಡಿ, ಸಮಾಜ ಹಿತದ ಸಲುವಾಗಿ ಕ್ಯಾ.ಬ್ರಿಜೇಶ್ ಚೌಟರನ್ನು ಎಲ್ಲರೂ ಬೆಂಬಲಿಸಬೇಕು, ಅವರು ಗೆದ್ದು ಸಮಾಜ ಬದಲಾವಣೆ ಮಾಡುತ್ತಾರೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸಹ ಪ್ರಭಾರಿ ನಿತಿನ್ ಕುಮಾರ್, ಕೋಶಾಧಿಕಾರಿ ಸಂಜಯ ಪ್ರಭು, ಮುಖಂಡರಾದ ಪೂಜಾ ಪೈ, ಜಗದೀಶ್ ಶೇವಣ ಮತ್ತಿತರರಿದ್ದರು.