ಕನ್ನಡಪ್ರಭ ವಾರ್ತೆ ಮಂಗಳೂರು
ಪುತ್ತೂರಿನಲ್ಲಿ ಪರಮೇಶ್ವರ ಶಾಸ್ತ್ರಿ- ಸತ್ಯಭಾಮಾ ದಂಪತಿಗೆ 1932ರ ಜು.15ರಂದು ಜನಿಸಿದ ಮನೋರಮಾ ಭಟ್, ಕಲಾವಿದರಾಗಿ, ಹೋರಾಟಗಾರರಾಗಿ, ನಾಟಕಕಾರ್ತಿಯಾಗಿ ಹಲವು ಕ್ಷೇತ್ರಗಳಲ್ಲಿ ಹೆಸರು ಪಡೆದವರು. ಮಂಗಳೂರು ಹೊರವಲಯದ ಉಳಾಯಿಬೆಟ್ಟಿನಲ್ಲಿ ‘ಅವತಾರ್’ ಮನೆಯಲ್ಲಿ ವಾಸವಾಗಿದ್ದ ಅವರು, ವಾರದ ಹಿಂದಷ್ಟೆ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಸ್ವಯಂವರ, ಶಬ್ದಗಳಾಗದ ಧ್ವನಿಗಳು ಅವರ ಕಥಾ ಸಂಕಲನಗಳು. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ವ್ಯಂಗ್ಯ ಬದುಕು (ಶಿಂಗಣ್ಣ ಖ್ಯಾತಿಯ ಕೆ.ರಾಮಕೃಷ್ಣ ಅವರ ಜೀವನ ಮತ್ತು ಸಾಧನೆ), ಮುಳಿಯರ ನೆನಪು (ಮುಳಿಯ ತಿಮ್ಮಪ್ಪಯ್ಯ ಅವರ ಜೀವನ ಸಾಧನೆ ಕುರಿತ ಲೇಖನ ಸಂಗ್ರಹ) ಅವರ ಸಂಪಾದಿತ ಕೃತಿಗಳು. ಹೆಣ್ಣಿಗೇಕೆ ಈ ಶಿಕ್ಷೆ? ಎಂಬ ವೈಚಾರಿಕ ಬರಹವನ್ನು ಬರೆದಿದ್ದಾರೆ. ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.ಅವರು 20ಕ್ಕೂ ಅಧಿಕ ರೇಡಿಯೋ ನಾಟಕ ರಚಿಸಿದ್ದು, ಅವುಗಳ ಕೃತಿಗಳನ್ನೂ ಹೊರತಂದಿದ್ದರು.
ಮನೋರಮಾ ಭಟ್ ಅವರ ಒಬ್ಬ ಪುತ್ರ ಜಯರಾಮ್ ಭಟ್ ಅಮೆರಿಕದಲ್ಲಿ ನೆಲೆಸಿದ್ದಾರೆ. ಇನ್ನೋರ್ವ ಪುತ್ರ ಮಹೇಶ್ ಎಂ. ಭಟ್ ಬೆಂಗಳೂರಿನಲ್ಲಿ ಖ್ಯಾತ ಛಾಯಾಚಿತ್ರ ತಂತ್ರಜ್ಞರಾಗಿದ್ದಾರೆ.