ಆಧುನಿಕ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಹಿರಿದು: ಸ್ವರ್ಣಲತಾ

KannadaprabhaNewsNetwork | Published : Mar 30, 2025 3:02 AM

ಸಾರಾಂಶ

ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಆಧುನಿಕ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಹಿರಿದಾಗಿದೆ. ಮಹಿಳೆಯರ ಮುಂದಿರುವ ಸವಾಲುಗಳು, ಅದನ್ನು ನಿಭಾಯಿಸಬೇಕಾದ ತಂತ್ರಗಾರಿಕೆ, ಮಹಿಳೆಯರಿಗೆ ಪರವಾಗಿರುವ ಕಾನೂನುಗಳು, ಪೋಕ್ಸೋ ಕಾಯ್ದೆಯ ಮಹತ್ವ ಅದರಿಂದ ಹೆಣ್ಣು ಸಮಾಜಕ್ಕೆ ಇರುವ ರಕ್ಷಣೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಮಾತ್ರ ಸುಸ್ಥಿರ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಪ್ರಸಿದ್ಧ ನ್ಯಾಯವಾದಿ ಸ್ವರ್ಣಲತಾ ಹೇಳಿದರು.

ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸುಜಯ ಸಿ ಜೈನ್ ರವರು, ಆಧುನಿಕ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ತೊಡಗಿಸಿಕೊಂಡರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯವನ್ನು ಮಾಡುತ್ತಿರುವ ನಮ್ಮ ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜವು ಇಂದು ತಾಲೂಕಿನಲ್ಲಿ ಗುರುತಿಸುವಂತಾಗಿದೆ. ನಾವೆಲ್ಲರೂ ಆದರ್ಶ ಸಾಧಕ ಮಹಿಳೆರಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಅಂತಹ ಗುರುತರವಾದ ಕಾರ್ಯಕ್ಕೆ ನಾವೆಲ್ಲ ಜೊತೆಯಾಗಿ ಕಾರ್ಯವನ್ನು ಮಾಡಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಪೂರ್ವ ಪರಂಪರೆಯಲ್ಲಿ ಸಾಧನೆಗೈದ ಹಲವಾರು ಜೈನ ಮಹಿಳಾ ಸಾಧಕಿಯರಲ್ಲಿ ಕೆಲವರ ಸಾಧನೆಯ ತುಣುಕನ್ನು ಸಭೆಯಲ್ಲಿ ಪರಿಚಯಿಸಲಾಯಿತು. ಕಾಳು ಮೆಣಸಿನ ರಾಣಿ ಚೆನ್ನಬೈರಾ ದೇವಿ ಇವರನ್ನು ಉಷಾ ಹಾಗೂ ಜೈನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜೈನ ಮಹಿಳೆ ಬಿರುದಾಂಕಿತ ರಾಧಮ್ಮ ಇವರ ಬಗ್ಗೆ ಸುರಕ್ಷಿತ ರವರು ಸಭೆಗೆ ಪರಿಚಯಿಸಿದರು.

ಶಾಂತಿಶ್ರೀ ತಂಡದಿಂದ ವಲಯ ಮಟ್ಟದ ಜಿನಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕೂ ತಂಡಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊಫೆಸರ್ ತ್ರಿಶಾಲ ಜೈನ್ ಕೆ ಎಸ್ ಇವರು "ಹತ್ತನೇ ಶತಮಾನದಿಂದ 21ನೇ ಶತಮಾನದವರೆಗೆ ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿರುವ ಜೈನ ರಾಣಿಯರ ಧೈರ್ಯ, ಸಾಹಸ, ಚಾಣಕ್ಯತನ, ಆಡಳಿತ ಶೈಲಿ ಮುಂತಾದ ವಿಚಾರಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಇಂದು ವಿಶ್ವದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಸಾಧನೆಗಳು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಬಾಹ್ಯಾಕಾಶ ಯಾನವನ್ನು ಮಾಡಿ ಯಶಸ್ವಿಯಾಗಿ ಧರೆಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಇವರ ಸಾಧನೆಯನ್ನು ಸ್ಪೂರ್ತಿಗಾಗಿ ಸಭೆಗೆ ತಿಳಿಸಲಾಯಿತು.

ಸ್ವಪ್ನ ಬಳಗದವರು ಪ್ರಾರ್ಥಿನೆ ಹಾಡಿದರು. ಕಾರ್ಯದರ್ಶಿ ರಾಜಶ್ರೀ ಪ್ರಸ್ತಾಪಿಸಿದರು. ಗುಣಮ್ಮ ಪಿ ಜೈನ್ ಸ್ವಾಗತಿಸಿ, ತ್ರಿಶಾಲ ಅತಿಕಾರಿ ವಂದಿಸಿದರು. ಸಂಘದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅನುಪ ಕುಮಾರಿ, ಧವಳ ನಿರ್ವಹಿಸಿದರು.

Share this article