ಉತ್ಸವ ರಾಕ್‌ ಗಾರ್ಡನ್‌ ವೇದಾರಾಣಿಗೆ ಮಹಿಳಾ ವಿವಿ ಗೌರವ ಡಾಕ್ಟರೆಟ್‌

KannadaprabhaNewsNetwork |  
Published : Jan 09, 2025, 12:45 AM IST
444 | Kannada Prabha

ಸಾರಾಂಶ

ಹೆಸರಾಂತ ಶಿಲ್ಪಕಲಾವಿದ ಡಾ. ಟಿ.ಬಿ. ಸೊಲಭಕ್ಕನವರ ಅವರ ಪುತ್ರಿಯಾದ ವೇದಾರಾಣಿ ಅವರಿಗೆ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆಗಳು ತಂದೆಯ ಬಳುವಳಿ ಎಂಬಂತೆ ರಕ್ತಗತವಾಗಿದೆ.

ಹುಬ್ಬಳ್ಳಿ:

ವಿಜಯಪುರದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ತನ್ನ 2024-25ನೇ ಸಾಲಿನ ಗೌರವ ಡಾಕ್ಟರೆಟ್‌ ಪದವಿಗೆ ಶಿಗ್ಗಾಂವಿ ಉತ್ಸವ ರಾಕ್‌ ಗಾರ್ಡನ್‌ ನಿರ್ವಾಹಕಿ ವೇದಾರಾಣಿ ದಾಸನೂರ ಅವರನ್ನು ಆಯ್ಕೆ ಮಾಡಿದೆ.

ಜ. 9ರಂದು ನಡೆಯಲಿರುವ ವಿವಿಯ 16ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ವೇದಾರಾಣಿ ಅವರಿಗೆ ಈ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ಹೆಸರಾಂತ ಶಿಲ್ಪಕಲಾವಿದ ಡಾ. ಟಿ.ಬಿ. ಸೊಲಭಕ್ಕನವರ ಅವರ ಪುತ್ರಿಯಾದ ವೇದಾರಾಣಿ ಅವರಿಗೆ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆಗಳು ತಂದೆಯ ಬಳುವಳಿ ಎಂಬಂತೆ ರಕ್ತಗತ. ಶಿಗ್ಗಾಂವಿ ತಾಲೂಕು ಹುಲಸೋಗಿ ಗ್ರಾಮದಲ್ಲಿ ಜನಿಸಿದ ವೇದಾರಾಣಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಶಿಗ್ಗಾಂವಿಯಲ್ಲಿ ಪೂರೈಸಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಮತ್ತು ಕವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಹುಬ್ಬಳ್ಳಿ (ಅಮರಗೋಳ)ಯ ಆಗರ್ಭ ಶ್ರೀಮಂತ ಪ್ರಕಾಶ ದಾಸನೂರ ಅವರ ಕೈಹಿಡಿದ ಬಳಿಕ ತಂದೆ ಸ್ಥಾಪಿಸಿದ ಉತ್ಸವ ರಾಕ್‌ ಗಾರ್ಡನ್‌ ನಿರ್ವಾಹಕಿಯಾಗಿ ಗಮನೀಯ ಸಾಧನೆ ಮಾಡಿದ್ದಾರೆ. ಈ ಗಾರ್ಡನ್‌ನಲ್ಲಿ ತಂದೆಯ ಕನಸು, ಆಶಯಗಳನ್ನು ಅಕ್ಷರಶಃ ಅನಾವರಣ ಮಾಡಿದ್ದಾರೆ. ಡಾ. ರಾಜಕುಮಾರ್ ಸರ್ಕಲ್, ಗ್ರಾಮೀಣ ಬದುಕು, ಬುಡಕಟ್ಟು ಜನಜೀವನ, ಹಿಂದಿನ ಕಾಲದ ಗ್ರಾಮೀಣ ಸಾರಿಗೆ, ಕುಸ್ತಿ ಕಣ, ರಾಶಿ ಕಣ ಇತ್ಯಾದಿಗಳು ಅರಳಿ ನಿಂತಿವೆ.

ಜನಪದ ರಂಗ ಮಂದಿರದ ಮೂಲಕ ಜನಪದ ಕಲೆಗಳಾದ ದೊಡ್ಡಾಟ, ಸಣ್ಣಾಟ, ನಾಟಕ, ಗಾಯನ ಇತ್ಯಾದಿಗಳಿಗೆ ನಿರಂತರ ಆಶ್ರಯ ನೀಡಿದ್ದಾರೆ. ಯುವಕರು, ವಿದ್ಯಾರ್ಥಿಗಳಿಗಾಗಿ ದೋಣಿವಿಹಾರ ಸೇರಿದಂತೆ ನವೀನ ಆವಿಷ್ಕಾರಗಳನ್ನು ಮಾಡಿದ್ದರಿಂದ ರಾಜ್ಯದ ಪ್ರಮುಖ ಪ್ರವಾಸಿ ಸ್ಥಾನಗಳ ಪಟ್ಟಿಯಲ್ಲಿ ರಾಕ್‌ ಗಾರ್ಡನ್‌ ಸ್ಥಾನ ಪಡೆದಿದ್ದರಿಂದ ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ರಾಜ್ಯ ಸರ್ಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಉತ್ಸವ ರಾಕ್‌ ಗಾರ್ಡ್‌ನ್‌ಗೆ ನೀಡಿ ಗೌರವಿಸಿತ್ತು. ಇದೀಗ ಇದರ ನಿರ್ವಾಹಕಿ ವೇದಾರಾಣಿ ಅವರಿಗೆ ಮಹಿಳಾ ವಿವಿ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸುತ್ತಿರುವುದು ಗಮನಾರ್ಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ