ಹರಪನಹಳ್ಳಿ: ಈಚೆಗೆ ನೂತನವಾಗಿ ರಚಿಸಿರುವ ಹರಪನಹಳ್ಳಿ ಬಿಜೆಪಿ ಮಂಡಲ ಘಟಕವನ್ನು ಕೂಡಲೇ ರದ್ದು ಮಾಡಬೇಕು, ಇಲ್ಲದಿದ್ದರೆ ಮುಂದಿನ ಪಕ್ಷದ ಯಾವುದೇ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ. ಇಲ್ಲಿಯ ಕೊಟ್ಟೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದ್ದಾರೆ.
ವಿಜಯನಗರ ಜಿಲ್ಲಾ ಬಿಜೆಪಿ ಘಟಕಕ್ಕೆ ಹರಪನಹಳ್ಳಿಯಿಂದ ತೆಗೆದುಕೊಂಡಿರುವ ಪದಾಧಿಕಾರಿಗಳ ಬಗ್ಗೆಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ನೋವಿದೆ. ಈಗ ಜಿಲ್ಲಾ ಘಟಕಕ್ಕೆ ನೇಮಕಗೊಂಡಿರುವ ಪದಾಧಿಕಾರಿಗಳು ಸಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ಈ ಬಗ್ಗೆ ಗಮನ ಹರಿಸಿ ಬಿಜೆಪಿ ಮಂಡಲ ಘಟಕ ಹಾಗೂ ಹರಪನಹಳ್ಳಿಯಿಂದ ಜಿಲ್ಲಾ ಘಟಕಕ್ಕೆ ಆಗಿರುವ ಪದಾಧಿಕಾರಿಗಳ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಕಾರ್ಯಕರ್ತರು ಶೀಘ್ರವೆ ರಾಜ್ಯಾಧ್ಯಕ್ಷರ ಬಳಿ ನಿಯೋಗ ಹೋಗಿ ಇಲ್ಲಿಯ ಆಗು-ಹೋಗುಗಳ ಬಗ್ಗೆ ತಿಳಿಸುತ್ತಾರೆ. ಹರಪನಹಳ್ಳಿ ಬಿಜೆಪಿ ನೂತನ ಮಂಡಲ ಘಟಕ ರದ್ದಾಗುವ ವರೆಗೂ ತಾಲೂಕಿನಲ್ಲಿ ಮುಂದೆ ನಡೆಯುವ ಬಿಜೆಪಿಯ ಯಾವುದೇ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಿರಲು ಕಾರ್ಯಕರ್ತರು ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.28 ವರ್ಷಗಳಿಂದ ಪಕ್ಷದಲ್ಲಿ ಕಾರ್ಯಕರ್ತನಾಗಿ, ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಲ ಸಮಿತಿ ರಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರ ಒತ್ತಾಸೆಗೆ ನಾನೂ ಬದ್ಧನಾಗಿರುತ್ತೇನೆ ಎಂದು ಈ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಅವರು ಸ್ಪಷ್ಟಪಡಿಸಿದರು.