ಹಾವೇರಿ: ಸ್ಥಳೀಯ ಅಶ್ವಿನಿನಗರದಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆಂಡ್ ಮಾರ್ಕೆಟಿಂಗ್ ಹೆಸರಿನಲ್ಲಿ ಕಚೇರಿ ಆರಂಭಿಸಿ ವರ್ಕ್ ಫ್ರಮ್ ಹೋಮ್ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಡೆಪಾಸಿಟ್ ಪಡೆದು ವಂಚಿಸಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.
ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದ ಮಹಿಳೆಯರು, ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎಂಬಾತ ತಮಗೆ ವಂಚನೆ ಎಸಗಿದ್ದು, ಕೋಟ್ಯಂತರ ರೂಪಾಯಿ ಪಡೆದು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದರು. ಕೂಡಲೇ ಆತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೊಂದ ಮಹಿಳೆಯರ ಪ್ರಕಾರ ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಮನೆಗಳಿಗೆ ನೀಡಿ, ಅವುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು. ರಾಜ್ಯಾದ್ಯಂತ ಸಂಸ್ಥೆಯ ಒಂಬತ್ತು ಶಾಖೆಗಳಿದ್ದು, ಕನಿಷ್ಠ 25 ಸಾವಿರದಿಂದ 5 ಲಕ್ಷದವರೆಗೆ ಡೆಪಾಸಿಟ್ ಮಾಡಬೇಕು ಎಂದು ತಿಳಿಸಲಾಗಿತ್ತು. ಅಲ್ಲದೆ, ₹1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹26 ಸಾವಿರ ಆದಾಯ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎನ್ನಲಾಗಿದೆ.ರಾಣೆಬೆನ್ನೂರು ತಾಲೂಕಿನ ಜೋಯಿಸರಹರಳಹಳ್ಳಿಯ ಶಂಕ್ರಮ್ಮ ಮಾತನಾಡಿ, ಮೊದಲಿಗೆ ನಾನು ₹1 ಲಕ್ಷ ಡೆಪಾಸಿಟ್ ಮಾಡಿದ್ದು, ನಾಲ್ಕೈದು ತಿಂಗಳು ಹಣವನ್ನು ಸರಿಯಾಗಿ ನೀಡಿದರು. ನಂತರ ಮತ್ತಷ್ಟು ನಂಬಿಕೆ ಮೂಡಿಸಿ ₹2 ಲಕ್ಷ ಹೆಚ್ಚುವರಿಯಾಗಿ ಪಾವತಿಸುವಂತೆ ಮಾಡಿದರು. ಆದರೆ ಆ ಬಳಿಕ ಒಂದು ರೂಪಾಯಿಯನ್ನೂ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂಸ್ಥೆಯ ಮೂಲಕ ಅಂದಾಜು ₹8ರಿಂದ ₹10 ಕೋಟಿ ವರೆಗೆ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುತ್ತಿದೆ ಎಂದು ಬ್ಯಾಡಗಿ ಮೂಲದ ವಕೀಲರಾದ ನವೀನ ಮುಳಗುಂದ ಹಾಗೂ ಮಂಜುನಾಥ ಅರಳಿಕಟ್ಟಿ ತಿಳಿಸಿದರು. ಆರೋಪಿಯನ್ನು ಶೀಘ್ರ ಬಂಧಿಸಿ, ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವಂತೆ ಅವರು ಆಗ್ರಹಿಸಿದರು.