ಕನ್ನಡಪ್ರಭ ವಾರ್ತೆ ಮಳವಳ್ಳಿ
ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಡಿ.17 ರಂದು ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವಕ್ಕೆ ಆಗಮಿಸುತ್ತಿರುವುದರಿಂದ ಈ ಮಹತ್ತರ ಕ್ಷಣವನ್ನು ಕಣ್ತುಂಬಿಕೊಳ್ಳಲು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಜನರು ಪಾಲ್ಗೊಳ್ಳಬೇಕು ಎಂದು ಜಯಂತ್ಯುತ್ಸವದ ಸಮಿತಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.17 ರಿಂದ 21ರವರೆಗೆ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಶ್ರೀ ಮಠದ ಉಸ್ತುವಾರಿಯಲ್ಲಿ ನಡೆಯಲಿರುವ ಜಯಂತ್ಯುತ್ಸವಕ್ಕೆ ರಾಷ್ಟ್ರಪತಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಲವು ಸಚಿವರು ಸೇರಿದಂತೆ ವಿವಿಧ ಮಠಾಧಿಪತಿಗಳು ಆಗಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜಯಂತ್ಯುತ್ಸವಕ್ಕೆ ರಾಷ್ಟ್ರಪತಿ ಸೇರಿದಂತೆ ಪ್ರಮುಖರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಬದಿಗೊತ್ತಿ ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮ ಯಶಸ್ಸಿಗೊಳಿಸಬೇಕು. ಶ್ರೀಮಠಕ್ಕೆ ಗೌರವ ಸಮರ್ಪಣೆ ಮಾಡಬೇಕು. ಎಲ್ಲಾ ಇಲಾಖೆ ಅಧಿಕಾರಿಗಳು ಜವಾಬ್ದಾರಿಗಳನ್ನು ಹಂಚಿಕೆ ಮಾಡಿಕೊಂಡು ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.ರಾಷ್ಟ್ರಪತಿಗಳ ಭದ್ರತೆ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಭಾಗದ ಪುಟ್‌ಬಾತ್‌ಗಳನ್ನು ತೆರವುಗೊಳಿಸಬೇಕು. ನಿರ್ದಿಷ್ಟ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ನಿರ್ವಹಿಸಬೇಕು. ರಾಜಕೀಯ ಬ್ಯಾನರ್‌ಗಳಿಗೆ ಅವಕಾಶ ನೀಡದೇ ಶ್ರೀ ಮಠಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಮಾತ್ರ ನಿಗದಿತ ಸ್ಥಳದಲ್ಲಿ ಹಾಕಲು ಅವಕಾಶ ಮಾಡಿಕೊಡಬೇಕು. ಕಂದಾಯ ಇಲಾಖೆ, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಒಂದೂಗೂಡಿ ಪಟ್ಟಣವನ್ನು ಸುಂದರವಾಗಿ ಸ್ವಚ್ಛಗೊಳಿಸಬೇಕೆಂದು ಹೇಳಿದರು.
ಪಟ್ಟಣದಾದ್ಯಂತ ಒಂದೇ ರೀತಿಯ ಸ್ವಾಗತ ಕಮಾನುಗಳನ್ನು ಅಳವಡಿಸಬೇಕು. ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚು ಒತ್ತು ನೀಡಿ, ತಳಿರು ತೋರಣಗಳಿಂದ ಎಲ್ಲಾ ಭಾಗದ ರಸ್ತೆಗಳನ್ನು ಸಿಂಗರಿಸಬೇಕು. ಅಗ್ನಿಶಾಮಕದಳ, ಹೆಚ್ಚುವರಿ ವಾಹನಗಳನ್ನು ಹೆಲಿಪ್ಯಾಡ್ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯು ಸಮರ್ಪಕ ಔಷಧಿಯೊಂದಿಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.ಭಕ್ತರಿಗೆ ಎಲ್ಲಾ ದಿನಗಳಲ್ಲೂ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ದಾಸೋಹ ಹಮ್ಮಿಕೊಂಡಿರುವುದರಿಂದ ಆರೋಗ್ಯ ಅಧಿಕಾರಿಗಳು ಆಹಾರವನ್ನು ಪರೀಕ್ಷೆಗೆ ಒಳಪಡಿಸಬೇಕು. ಭಕ್ತರಿಗೆ ಕುಡಿಯುವ ನೀರು ಸೇರಿ ಮೂಲ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದರು.
ವಸತಿ ಗೃಹ, ರೆಸಾರ್ಟ್ ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡದೇ ಸಂಪೂರ್ಣ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ವೇದಿಕೆ ನಿರ್ವಹಣೆಯನ್ನು ಮಠದ ವತಿಯಿಂದ ನಿರ್ವಹಿಸಲಿದ್ದು, ವಿವಿಧ ಇಲಾಖೆಗಳಿಂದ ಸ್ಟಾಲ್‌ಗಳನ್ನು ಹಾಕಲು ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಿಕೊಳ್ಳಬೇಕೆಂದು ತಿಳಿಸಿದರು.ಜಯಂತ್ಯುತ್ಸವದ ಸಮಿತಿ ಸದಸ್ಯರು ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಸೇವಕರಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಅಧಿಕಾರಿಗಳು, ಜಯಂತಿ ಆಚರಣಾ ಸಮಿತಿ ಸದಸ್ಯರು ಹಾಗೂ ಸುತ್ತೂರು ಮಠದ ಸಿಬ್ಬಂದಿ ಇದ್ದರು.