ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ ಮತ್ತು ಸರ್ಕಾರದಿಂದ ಫಲಿತಾಂಶ ಸುಧಾರಣೆಗಾಗಿ ಬಂದಿರುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಫಲಿತಾಂಶ ಸುಧಾರಣೆಗೆ ಶ್ರಮವಹಿಸಬೇಕು. ಶೇ.100ರಷ್ಟು ಫಲಿತಾಂಶ ಸುಧಾರಣೆ ಗುರಿಯೊಂದಿಗೆ ಎಲ್ಲರೂ ಶ್ರಮ ವಹಿಸಿ ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ ಮತ್ತು ಸರ್ಕಾರದಿಂದ ಫಲಿತಾಂಶ ಸುಧಾರಣೆಗಾಗಿ ಬಂದಿರುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಫಲಿತಾಂಶ ಸುಧಾರಣೆಗೆ ಶ್ರಮವಹಿಸಬೇಕು. ಶೇ.100ರಷ್ಟು ಫಲಿತಾಂಶ ಸುಧಾರಣೆ ಗುರಿಯೊಂದಿಗೆ ಎಲ್ಲರೂ ಶ್ರಮ ವಹಿಸಿ ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಪ್ರಸಕ್ತ ಸಾಲಿನಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಹೆಚ್ಚಿನ ಶ್ರಮವಹಿಸಬೇಕು. ಒಂದು ವೇಳೆ ಫಲಿತಾಂಶ ಕಡಿಮೆಯಾದ್ದಲ್ಲಿ ಅಂತಹ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಫಲಿತಾಂಶ ಸುಧಾರಣೆಗಾಗಿ ಇಲಾಖೆಯ ಎಲ್ಲ ಅಧಿಕಾರಿಗಳು ಶ್ರಮವಹಿಸಿ. ಮುಂಬರುವ 20 ದಿನಗಳ ಅವಧಿಯ ಸದುಪಯೋಗ ಪಡಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪುನರ್ ಮನನ, ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಸೇರಿ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸಲು ಸೂಚನೆ ನೀಡಿದರು. ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ, ಯುಪಿಎಸ್, ಸ್ಟೋರೇಜ್ ಡಿವೈಸ್, ಸೂಕ್ತ ಕೊಠಡಿಗಳ ವ್ಯವಸ್ಥೆ, ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿ ಮೂಲಭೂತ ಸೌಲಭ್ಯಗಳ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಮಾತನಾಡಿ, ಕಡಿಮೆ ಫಲಿತಾಂಶ ಸಾಧಿಸಿರುವ ಪ್ರಾಂಶುಪಾಲರೊಂದಿಗೆ
ವಿಶೇಷ ಚರ್ಚೆ ನಡೆಸಿದ ಅವರು ಈ ಬಾರಿ ನಿರೀಕ್ಷಿತ ಪ್ರಮಾಣದ ಗುರಿ ಸಾಧಿಸಲು ಸೂಚಿಸಿದರು. ಕಡಿಮೆ ಫಲಿತಾಂಶವಿರುವ ಕಾಲೇಜುಗಳಲ್ಲಿ ಇಚ್ಚಾಶಕ್ತಿ ವಹಿಸಿ ಸುಧಾರಣೆ ಮಾಡಬೇಕು. ಫಲಿತಾಂಶ ಒಂದೇ ರೀತಿಯಾಗಿರಬೇಕು. ಮಕ್ಕಳಲ್ಲಿರುವ ಪರೀಕ್ಷೆ ಭಯ
ಹೋಗಲಾಡಿಸಿ, ಬದಲಾವಣೆ ಮಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಸೂಚಿಸಿ, ವಿದ್ಯಾರ್ಥಿಗಳಿಗೆ ನುರಿತ ವಿಷಯ ತಜ್ಞರಿಂದ ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಹೊಸಮನಿ ಮಾತನಾಡಿ, ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳ ಕುರಿತು ಸಭೆಗೆ ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕುರಿಗೆ ವಿಷಯವಾರು ಕಾರ್ಯಾಗಾರ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ಸೇರಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ನಿಗದಿತ ಗುರಿಯಂತೆ ಉತ್ತಮ ಪ್ರಗತಿ ಸಾಧಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಲು ಸಮಿತಿ ರಚಿಸಿದ್ದು, ಆ ಸಮಿತಿಯ ಮೂಲಕ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು. ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.