ಕನಕಗಿರಿ:
ಶಿಕ್ಷಕರೇ ರಾಜಕಾರಣ ಮಾಡಿಕೊಂಡು ಓಡಾಡಬೇಡಿ. ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶ 9ನೇ ಸ್ಥಾನದೊಳಗೆ ಬರಲು ಶ್ರಮವಹಿಸಿ ಕೆಲಸ ಮಾಡಬೇಕು. ಮಕ್ಕಳಲ್ಲಿ ಕಲಿಕೆಯ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬಿಇಒ ಕಚೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಡಾ. ಎಸ್. ರಾಧಾಕೃಷ್ಣನ್ 137ನೇ ಜನ್ಮದಿನ ಹಾಗೂ ಶಿಕ್ಷಕ ದಿನಾಚರಣೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಗುರು-ಶಿಷ್ಯ ಪರಂಪರೆ, ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ಮನಸ್ಸು ಮಾಡಿದರೆ ದೇಶವೇ ತಿರುಗಿ ನೋಡುವಂತೆ ವಿದ್ಯಾರ್ಥಿಗಳಿಗೆ ಕಲಿಸುವ ಶಕ್ತಿ ಇದೆ. ಆ ಮಹತ್ವವಾದ ಶಕ್ತಿ ಇರುವವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ, ಪ್ರೌಢ ಹಾಗೂ ಅತಿಥಿ ಶಿಕ್ಷಕರನ್ನು ಗೌರವಿಸಲಾಯಿತು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಂಶಾದಬೇಗಂ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅನಿಲಕುಮಾರ ಸೇರಿದಂತೆ ಶಿಕ್ಷಕರು ಇದ್ದರು.
ಶಿಷ್ಟಾಚಾರ ಉಲ್ಲಂಘನೆ-ಆಕ್ರೋಶ:ಅಖಂಡ ಗಂಗಾವತಿ ತಾಲೂಕು ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ತಂಗಡಗಿ ಸೇರಿದಂತೆ ಹಲವು ಜನಪ್ರತಿನಿಧಿಗಳ ಪೋಟೋ ಬಳಸದೆ ಬ್ಯಾನರ್ ಅಳವಡಿಸಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಸಚಿವರು ತಮ್ಮ ವಾಹನ ಇಳಿದು ವೇದಿಕೆಯತ್ತ ಹೋಗುವಾಗ ಬೆಂಬಲಿಗರು ಹಿಂದಿರುಗಿ ಪಪಂ ಕಚೇರಿಯಲ್ಲಿಯೇ ಕುಳಿತಿದ್ದರು. ಸಚಿವರು ಕರೆದರೂ ಕೈ ಮುಖಂಡರು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಇದರಿಂದ ಸಚಿವರು ಬೇಸರದಿಂದಲೇ ವೇದಿಕೆ ತೆರಳಿದರು. ಕಾರ್ಯಕ್ರಮ ತಡವಾಗಿ ಆರಂಭವಾಗಿದ್ದರಿಂದ ಕೆಲವು ಶಿಕ್ಷಕರು ಸ್ಥಳದಿಂದ ನಿರ್ಗಮಿಸಿದ್ದರು. ಇನ್ನೊಂದೆಡೆ ಆಮಂತ್ರಣ ಪತ್ರಿಕೆಯಲ್ಲಿ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹೆಸರು ಹಾಕದೆ ಇರುವುದರಿಂದ ಚರ್ಚೆಗೆ ಗ್ರಾಸವಾಗಿತ್ತು. ಕಾರ್ಯಕ್ರಮದ ಅಸ್ತವ್ಯಸ್ತವಾಗುತ್ತಿದ್ದಂತೆ ಬಿಇಒ ನಟೇಶ ತಬ್ಬಿಬ್ಬಾದರು.