ಗಜೇಂದ್ರಗಡ: ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ಮತಪಟ್ಟಿಯಿಂದ ತೆಗೆಯುವ ಉದ್ದೇಶದಿಂದ ಎಸ್‌ಐಆರ್ ಜಾರಿಗೆ ತಂದಿದ್ದು, ಮತದಾರರ ಸಂವಿಧಾನ ಬದ್ಧವಾದ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಬೂತ್ ಲೆವಲ್ ಏಜೆಂಟರರು ಶ್ರಮಿಸಬೇಕು ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ತಿಳಿಸಿದರು.
ಮತದಾರರ ಹಕ್ಕುಗಳನ್ನು ರಕ್ಷಿಸಲು ಮನೆ, ಮನೆಗೆ ತೆರಳಿ ಎಸ್‌ಐಆರ್ ಕುರಿತು ಜಾಗೃತಿ ಜತೆಗೆ ಮತದಾರರ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಬೇಕಿರುವ ದಾಖಲೆ ಸಂಗ್ರಹಣೆ ಮಾಡಿ ಮಾಹಿತಿ ನೀಡಬೇಕು. ಕಾಂಗ್ರೆಸ್ ಪಕ್ಷವು ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎನ್ನುವ ಆಶಯದಡಿ ಸರ್ಕಾರ ನಡೆಸುತ್ತಿದೆ. ಹೀಗಾಗಿ ಪ್ರತಿ ಕನ್ನಡಗಿನ ಮತದಾನದ ಹಕ್ಕನ್ನು ರಕ್ಷಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.
ಮುಖಂಡರಾದ ಶಿವರಾಜ ಘೋರ್ಪಡೆ, ಎಚ್.ಎಸ್. ಸೋಂಪುರ ಹಾಗೂ ಎ.ಡಿ. ಕೋಲಕಾರ ಮಾತನಾಡಿ, ಕಳೆದ ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಎಸ್‌ಐಆರ್ ವೇಳೆ ಬಡವರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸೇರಿ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್‌ನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎಸ್‌ಐಆರ್ ಕುರಿತು ಪಕ್ಷದ ವರಿಷ್ಠರು ಚುನಾವಣಾ ಆಯೋಗಕ್ಕೆ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಅನೇಕ ಗೊಂದಲ ಹಾಗೂ ಸಮಸ್ಯೆಗಳು ಪರಿಷ್ಕರಣೆಯು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಅಲ್ಪ ಅಂತರದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಸಮೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ ಎಂದರು.ಈ ವೇಳೆ ಎಸ್ಐಆರ್ ತರಬೇತುದಾರರಾದ ಗಜೇಂದ್ರಗಡ ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹಾಗೂ ಬಿ.ಎಸ್. ರಡ್ಡರ ಎಸ್‌ಐಆರ್ ಗಜೇಂದ್ರಗಡ ಪಟ್ಟಣದ ೨೩ ವಾರ್ಡ್ ಹಾಗೂ ರಾಜೂರು ಗ್ರಾಪಂ ವ್ಯಾಪ್ತಿಯ ಕಾಲಕಾಲೇಶ್ವರ, ಭೈರಾಪೂರ, ರಾಜೂರ, ದಿಂಡೂರು ಗ್ರಾಮದ ಬೂತ್ ಲೆವಲ್ ಏಜೆಂಟರರಿಗೆ ಮಾಹಿತಿ ನೀಡಿದರು.