ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಬದಿಯಲ್ಲಿದ್ದ ದೊಡ್ಡ ತೋಡೊಂದು ಮುಚ್ಚಲ್ಪಟ್ಟಿದ್ದು, ಭಾನುವಾರ ಸುರಿದ ಮಳೆಗೆ ಚರಂಡಿಯಲ್ಲಿ ನೀರು ಹರಿಯಲಾಗದೆ ನಟ್ಟಿಬೈಲ್‌ನ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿದೆ.
ಉಪ್ಪಿನಂಗಡಿ ಭಾಗದಲ್ಲಿ ಚತುಷ್ಪಥ ರಾಷ್ಟ್ರಕೀಯ ಹೆದ್ದಾರಿ ಕಾಮಗಾರಿ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳದೆ ಅಲ್ಲಲ್ಲಿ ಅರೆಬರೆ ಎಂಬಂತೆ ಕಾಮಗಾರಿಗಳು ನಡೆಯುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಹೆದ್ದಾರಿ ಬದಿಗೆ ಕಟ್ಟಲಾದ ಕಾಂಕ್ರಿಟ್ ತಡೆಗೊಡೆ ಬುಡದಿಂದಲೇ ಕುಸಿದು ಬಿದ್ದು ಅನಾಹುತ ಸಂಭವಿಸಿತ್ತು. ಈ ಬಾರಿ ಸಮರ್ಪಕ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವಿಳಂಬವಾಗಿದೆ.
ಭಾನುವಾರ ಸುರಿದ ಮಳೆಗೆ ಚರಂಡಿಯಲ್ಲಿ ಹರಿದು ಬಂದ ನೀರು ಸರಾಗವಾಗಿ ಹರಿಯಲಾಗದೆ ನಟ್ಟಿಬೈಲು ಪ್ರದೇಶದ ಕೃಷಿ ಭೂಮಿಗೆ ನುಗ್ಗಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆ ಈ ಬಗ್ಗೆ ಗಮನಹರಿಸಿ ಶೀಘ್ರವೇ ತಡೆಗೋಡೆ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮನೆ, ಅಂಗಡಿ, ಗ್ಯಾರೇಜ್‌ಗೆ ನುಗ್ಗಿದ ಮಳೆ ನೀರು: ೩೪-ನೆಕ್ಕಿಲಾಡಿಯಲ್ಲಿ ಮಣ್ಣು ಹಾಕಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಇದರ ಬದಿಯಲ್ಲಿ ಚರಂಡಿ, ಮೋರಿ ನಿರ್ಮಾಣ ಆಗದ ಪರಿಣಾಮ ಮಳೆಯ ಕೆಸರು ನೀರು ಹಲವು ಮನೆ, ಅಂಗಡಿ, ಗ್ಯಾರೇಜ್, ಕಬ್ಬಿಣ ಮಾರಾಟ ಮೊದಲಾದ ಅಂಗಡಿಗಳಿಗೆ ನುಗ್ಗಿದ್ದು, ಹಲವರಿಗೆ ಅಪಾರ ನಷ್ಟವಾಗಿದೆ.
೩೪-ನೆಕ್ಕಿಲಾಡಿಯಲ್ಲಿ ಜಯಂತಿ ಎಂಬವರ ಮನೆ ಮತ್ತು ದನದ ಹಟ್ಟಿಯೊಳಗೆ ಕೆಸರು ನೀರು ನುಗ್ಗಿದೆ. ಮಾತ್ರವಲ್ಲದೆ ಭಾರಿ ಗಾಳಿಗೆ ಜಯಂತಿ ಅವರ ಮಾಡಿನ ಹೆಂಚು ಹಾರಿ ಹೋಗಿದ್ದು, ಸಾವಿರಾರು ರುಪಾಯಿ ನಷ್ಟವುಂಟಾಗಿದೆ.
ಜಗಜೀವನ್ ರೈ ಎಂಬವರ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ಸುತ್ತ ಕೆಸರು ಆವರಿಸಿದೆ. ಕಾರ್ ಕ್ಲಬ್, ಪಾಂಡೇಲ್ ಸ್ಟೀಲ್ ಮೊದಲಾದ ವರ್ತಕ ಸಂಸ್ಥೆಯ ಒಳಗೂ ನೀರು ನುಗ್ಗಿದ್ದು ಅಪಾರ ನಷ್ಟ ಉಂಟಾಗಿರುವುದಾಗಿ ಎಂದು ದೂರಲಾಗಿದೆ.