ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಸನದಲ್ಲಿ ಡಿ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಆಯೋಜಿಸಿರುವ ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮನವಿ ಮಾಡಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಸುದೀರ್ಘ 45 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ನಿಷ್ಕಳಂಕ ಹಾಗೂ ನೈತಿಕತೆಯ ಸಾಕ್ಷಿ ಪ್ರಜ್ಞೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನರೊಂದಿಗಿದ್ದಾರೆ. ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ನಡೆಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲದಿದ್ದರೂ ಅವರನ್ನು ಕಳಂಕಿತ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಸಿ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಜನಪರ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಮನೆಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸಲಾಗುತ್ತಿದೆ. ಜನಪರ ಆಡಳಿತದಿಂದ ಕೆಂಗೆಟ್ಟಿರುವ ಕೆಲವು ರಾಜಕೀಯ ದುಷ್ಟಶಕ್ತಿಗಳು ಸಾಮಾನ್ಯ ಜನರನ್ನು ಮುಖ್ಯಮಂತ್ರಿಗಳ ವಿರುದ್ದ ಎತ್ತಿಕಟ್ಟುವ ಷಡ್ಯಂತ್ರದಲ್ಲಿ ನಿರತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮುಂದೆ ಸತ್ಯವನ್ನು ಬಿಂಬಿಸಬೇಕಾಗಿದೆ ಎಂದು ಹೇಳಿದರು.ಡಿ.5 ರಂದು ದಕ್ಷಿಣ ಕರ್ನಾಟಕದ 6 ಜಿಲ್ಲೆಗಳ ಜನರನ್ನು ಒಗ್ಗೂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಸಮಾವೇಶವಲ್ಲ. ಬದಲಾಗಿ ಸಮಸ್ತ ಕಾಂಗ್ರೆಸ್ಸಿಗರ ಸ್ವಾಭಿಮಾನದ ಸಮಾವೇಶ. ಮುಂಬರುವ ಜಿಪಂ, ತಾಪಂ ಮತ್ತು ಗ್ರಾಪಂ ಚುನಾವಣೆಗಳಿಗೂ ಇದು ಸಂಘಟನಾತ್ಮಕ ವೇದಿಕೆಯಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ರಾಜ್ಯ ಕುರುಬರ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡ ಎಂ.ಡಿ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಶ್ಯಾಮಣ್ಣ, ಪುರಸಭಾ ಸದಸ್ಯ ಕೆ.ಆರ್.ರವೀಂದ್ರಬಾಬು, ಮುಖಂಡರಾದ ಅಗಸರಹಳ್ಳಿ ಗೋವಿಂದರಾಜು, ಲಕ್ಷ್ಮೀಪುರ ಚಂದ್ರೇಗೌಡ ಇದ್ದರು.