ಅನುದಾನ ಗುತ್ತಿಗೆದಾರರ ಕೈಗೆ ಸೇರಿದ್ದರೂ ಕಾಮಗಾರಿ ನನೆಗುದಿಗೆ
ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟ ಕಟ್ಟಡಎಂ. ಪ್ರಹ್ಲಾದ್
ಕನ್ನಡಪ್ರಭ ವಾರ್ತೆ ಕನಕಗಿರಿಮುಜರಾಯಿ ಇಲಾಖೆಯ ಎ ಗ್ರೇಡ್‌ನಲ್ಲಿರುವ ಜಿಲ್ಲೆಯ ಕನಕಾಚಲಪತಿ ದೇವಸ್ಥಾನದ ದಾಸೋಹ ಭವನ ಕಾಮಗಾರಿ ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಶಿವರಾಜ ತಂಗಡಗಿ ಗಮನ ಹರಿಸಿ ಅಗತ್ಯ ಅನುದಾನ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
೨೦೧೯-೨೦ನೇ ಸಾಲಿನಲ್ಲಿ ಭೂಸೇನಾ ನಿಗಮದಿಂದ ಶ್ರೀ ಕನಕಾಚಲಪತಿ ದೇವಸ್ಥಾನ ವ್ಯಾಪ್ತಿಯ ಜಾಗೆಯಲ್ಲಿ ನಿರ್ಮಾಣಗೊಂಡಿರುವ ದಾಸೋಹ ಭವನ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣವಾಗಿಲ್ಲ. ಬಿಡುಗಡೆಯಾದ ಅನುದಾನ ಈಗಾಗಲೇ ಗುತ್ತಿಗೆದಾರರ ಕೈಗೆ ಸೇರಿದ್ದರೂ ಕಾಮಗಾರಿ ನನೆಗುದಿಗೆ ಬಿದ್ದಿದೆ.ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡದಲ್ಲಿ ಮದ್ಯದ ಪೌಚ್‌ಗಳು, ಬೀಡಿ, ಸಿಗರೇಟಿನ ತುಂಡುಗಳು ಎಲ್ಲೆಂದರಲ್ಲಿ ಎಸೆಯಲಾಗಿದ್ದು, ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಹೊರ, ಒಳಭಾಗದಲ್ಲಿ ಕೆಲವರು ಶೌಚ ಮಾಡುತ್ತಿದ್ದು, ದುರ್ವಾಸನೆ ಬೀರುತ್ತಿದೆ. ದಾಸೋಹ ಭವನ ಕಟ್ಟಡದ ಈ ಅವ್ಯವಸ್ಥೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೂರ್ನಾಲ್ಕು ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದಾಗಲೂ ಅವ್ಯವಸ್ಥೆಯನ್ನು ಕಂಡು ಮುಜುಗರಕ್ಕೀಡಾಗಿದ್ದರು. ಗುತ್ತಿಗೆದಾರರು ಅರೆಬರೆ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಿದ್ದಾರೆನ್ನುವ ಮಾಹಿತಿ ತಿಳಿದ ಅಧಿಕಾರಿ ಸ್ಥಳದಿಂದ ನಿರ್ಗಮಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದ ಅಧಿಕಾರಿಗಳು ಕ್ರಮವಹಿಸದಿರುವುದು ಅನುಮಾನಗಳಿಗೆ ಕಾರಣವಾಗಿವೆ.ಈ ಹಿಂದಿನ ಶಾಸಕರ ಅವಧಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಸಿಸಿ ರಸ್ತೆ, ಹೈಮಾಸ್ಟ್ ದೀಪ, ಶುದ್ಧ ನೀರಿನ ಘಟಕ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ₹೨.೫೦ ಕೋಟಿ ಬಿಡುಗಡೆಯಾಗಿತ್ತು. ಈ ಪೈಕಿ ಮೂರು ಕಾಮಗಾರಿಗಳು ಮುಗಿದಿದ್ದು, ದಾಸೋಹ ಭವನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಭಕ್ತರಿಗೆ ತೊಂದರೆಯಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕೆಂಬುದು ಭಕ್ತರ ಆಗ್ರಹವಾಗಿದೆ.ಪ್ರವಾಸೋದ್ಯಮ ಇಲಾಖೆ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ದಾಸೋಹ ಭವನ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅನುದಾನ ನೀಡಿದರೆ ಎರಡು ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಭೂಸೇನಾ ನಿಗಮದ ಎಂಡಿ ಝಡ್.ಎಂ. ಚಿಂಚೋಳಿಕರ್.