ಯಲಬುರ್ಗಾ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ 34 ಕೆರೆ ತುಂಬಿಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪ್ರಸ್ತುತ ಎದುರಾಗಿರುವ ಬರ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯಲ್ಲಿ ಯಲಬುರ್ಗಾವನ್ನು ಖಂಡಿತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು. ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
₹೨.೫೦ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗುನ್ನಾಳ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ೧೦೦ ಸ್ಥಾನಗಳ ಲಭ್ಯತೆಯ ಬಾಲಕಿಯರ ವಸತಿ ನಿಲಯ ಮಂಜೂರು ಮಾಡಲಾಗುವುದು. ಗುನ್ನಾಳ ಪಾಲಿಟೆಕ್ನಿಕ್ ಕಾಲೇಜನ್ನು ಮಾದರಿಯಾಗಿ ರೂಪಿಸಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವ ಬ್ಯಾಂಕ್ ಯೋಜನೆಯಡಿ ₹೧೦ ಕೋಟಿ ಅನುದಾನ ಒದಗಿಸಲಾಗುವುದು ಹಾಗೂ ಇದಕ್ಕಾಗಿ ಅಗತ್ಯವಿರುವ 5 ಎಕರೆ ಜಮೀನು ಪಡೆಯಲಾಗುವುದು ಎಂದರು.ಜನರ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಯಾವುದೇ ವಿಳಂಬ ಮಾಡಬಾರದು. ಜನಸಾಮಾನ್ಯರ ಕುಂದು-ಕೊರತೆಗಳಿಗೆ ಸ್ಪಂದಿಸುವುದು ಆಡಳಿತದ ಪ್ರಮುಖ ಕರ್ತವ್ಯ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ: ಗುನ್ನಾಳದಲ್ಲಿ ₹೨.೫೦ ಕೋಟಿ ವೆಚ್ಚದ ಪದವಿಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ, ಬುಕನಟ್ಟಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ₹೩೦ ಲಕ್ಷ ವೆಚ್ಚದ ೨ ನೂತನ ತರಗತಿ ಕೊಠಡಿಗಳ ಉದ್ಘಾಟನೆ. ಕಲ್ಲಭಾವಿ-ಯಡೋಣಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಲಭಾವಿ ಹಳ್ಳಕ್ಕೆ ₹೩.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ. ಹಿರೇವಂಕಲಕುಂಟಾದ ಸರ್ಕಾರಿ ಪ್ರೌಢಶಾಲೆಯಲ್ಲಿ ₹೬೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ೪ ಕೊಠಡಿಗಳ ಲೋಕಾರ್ಪಣೆ, ಹೊಸಳ್ಳಿಯ ಹರಿಜನ ಕಾಲನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವರೆಗೆ ₹೧ ಕೋಟಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ. ಬಳೂಟಗಿ ಸರ್ಕಾರಿ ಪ್ರೌಢಶಾಲೆಯ ₹೬೦ ಲಕ್ಷ ವೆಚ್ಚದ ೪ ನೂತನ ತರಗತಿ ಕೊಠಡಿಗಳ ಉದ್ಘಾಟನೆ, ಬಸಾಪುರ ರಸ್ತೆ ಮಾರ್ಗದ ಹಳ್ಳಕ್ಕೆ ₹೧.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ರಿಡ್ಜ್-ಕಂ-ಬ್ಯಾರೇಜ್ ಕಾಮಗಾರಿಯನ್ನು ಸಚಿವ ಬಸವರಾಜ ರಾಯರಡ್ಡಿ ಲೋಕಾರ್ಪಣೆ ಮಾಡಿದರು.