ಹಾನಗಲ್ಲ: ಪ್ರಸ್ತುತ ಸಂದರ್ಭದಲ್ಲಿ ಆಧುನಿಕತೆಯ ಪ್ರಭಾವ ಯುವ ಸಮೂಹವನ್ನು ಆವರಿಸಿದ್ದು, ಧಾರ್ಮಿಕ ಕಾರ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದೂರ ಸರಿಯುತ್ತಿದ್ದಾರೆ. ಮಾನಸಿಕ ಶಾಂತಿ ಕದಡುವ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಯುವಕರು ಮುಗಿಬೀಳುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ವಿಷಾದ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣರ ನಾಡಿನಲ್ಲಿ ಇಂದು ಜಾತಿ, ಧರ್ಮ, ಪಂಥ ಎಂದು ಬೇಧ ಎಣಿಸುವ ಮೂಲಕ ಸಾಮರಸ್ಯದ ಅಡಿಪಾಯಕ್ಕೆ ಕೊಡಲಿಪೆಟ್ಟು ಹಾಕಲಾಗುತ್ತಿದೆ. ಶಸ್ತಾಸ್ತ್ರದಿಂದ ಸಮಾಜ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಶಾಸ್ತ್ರದಿಂದ ಮಾತ್ರ ಪತಿವರ್ತನೆ ಸಾಧ್ಯವಿದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಆಧುನಿಕ ಜೀವನಶೈಲಿ ರೂಢಿಸಿಕೊಂಡ ನಾವಿಂದು ನಮ್ಮ ಪರಂಪರೆ ಮರೆತ ಪರಿಣಾಮ ನಮ್ಮದೇ ಆಚಾರ, ವಿಚಾರಗಳು ಅಳಿವಿನ ಅಂಚಿಗೆ ಬಂದು ತಪುಲಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ಇಂದಿನ ನವ ಜನಾಂಗ ಬಹುಮಾಧ್ಯಮ, ಜಾಗತೀಕರಣ, ಉದಾರೀಕರಣಗಳ ತೆವಲಿಗೆ ಸಿಕ್ಕು ತಂದೆ-ತಾಯಿಯನ್ನು ನಿರ್ಲಕ್ಷಿಸುತ್ತಿರುವ ಪರಿಣಾಮವಾಗಿ ಕೌಟುಂಬಿಕ ಪ್ರೀತಿ, ವಾತ್ಸಲ್ಯ, ಸಹಬಾಳ್ವೆ, ಹೊಂದಾಣಿಕೆಗಳಿಂದ ವಿಮುಖರಾಗಿದ್ದಾರೆ. ಆತ್ಮೋನ್ನತಿಯ ದಿವಾಳಿತನದ ಅಂಚಿನಲ್ಲಿರುವ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಇದ್ದರು.