ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

KannadaprabhaNewsNetwork | Published : Nov 7, 2024 12:31 AM

ಸಾರಾಂಶ

ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಅಳತೆಗೆ ತಕ್ಕಂತೆ ಕಾಮಗಾರಿ ನಡೆದಿರುವ ಬಗ್ಗೆ ಕಡತಗಳಲ್ಲಿನ ಮಾಹಿತಿ

ನರಗುಂದ: ತಾಲೂಕಿನ ವಿವಿಧ ಗ್ರಾಪಂಗಳಿಗೆ ಮಂಗಳವಾರ ಜಿಪಂ ಸಿಇಒ ಭರತ್. ಎಸ್ ಭೇಟಿ ನೀಡಿ ನರೇಗಾ ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು.

ಹುಣಶೀಕಟ್ಟಿ, ಕೊಣ್ಣೂರು ಮತ್ತು ಶಿರೋಳ ಗ್ರಾಪಂಗಳಿಗೆ ಭೇಟಿ ನೀಡಿದ ಭರತ್.ಎಸ್ , ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡ ಕಾಮಗಾರಿ ಪರಿಶೀಲಿಸಿದರು. ಹುಣಶೀಕಟ್ಟಿ ಗ್ರಾಪಂ ವ್ಯಾಪ್ತಿಯ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಮತ್ತು ಪಿಆರ್.ಇಡಿ ಇಲಾಖೆ ಒಗ್ಗೂಡುವಿಕೆಯಡಿ ₹1.33 ಲಕ್ಷ ವೆಚ್ಚದಡಿ ನಿರ್ಮಿಸುತ್ತಿರುವ ಶಾಲಾ ಶೌಚಾಲಯದ ಕಾಮಗಾರಿ, ಕೊಣ್ಣೂರು ಗ್ರಾಪಂ ನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಗಟಾರ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಗತಿ ಹಂತದಲ್ಲಿರುವ ಕಾಮಗಾರಿ ಆದಷ್ಟು ಬೇಗ ಮುಕ್ತಾಯಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಮುಕ್ತಾಯಗೊಂಡ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಅಳತೆಗೆ ತಕ್ಕಂತೆ ಕಾಮಗಾರಿ ನಡೆದಿರುವ ಬಗ್ಗೆ ಕಡತಗಳಲ್ಲಿನ ಮಾಹಿತಿ ಪರಿಶೀಲಿಸಿದರು.

ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ಅವರು, ಚಿಕಿತ್ಸೆಗೆ ಬಂದಿದ್ದ ರೋಗಿಗಳ ಜತೆ ಸಮಾಲೋಚನೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಗತ್ಯ ಚಿಕಿತ್ಸಾ ಸೌಲಭ್ಯ ತಲುಪುತ್ತಿರುವ ಕುರಿತು ಮಾಹಿತಿ ಪಡೆದರು.

ಈ ವೇಳೆ ಹಾಜರಿದ್ದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪಂಕಜಾ ಮೈತ್ರಿ ಜತೆಗೆ ಸಮಾಲೋಚನೆ ನಡೆಸಿ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಡೆಲವರಿ ಪ್ರಕರಣಗಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಔಷಧಿ ಉಗ್ರಾಣಕ್ಕೆ ಭೇಟಿ ನೀಡಿ ಔಷಧಿಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದರು. ಲ್ಯಾಬ್, ಶಸ್ತ್ರ ಚಿಕಿತ್ಸೆ ಕೊಠಡಿ ಸೇರಿದಂತೆ ಆರೋಗ್ಯ ಕೇಂದ್ರದ ಪ್ರತಿ ವಿಭಾಗಕ್ಕೂ ತೆರಳಿ ಆರೋಗ್ಯ ಕೇಂದ್ರದ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ತಪಾಸಣೆ ನಡೆಸಿದರು.

ಶಿರೋಳ ಗ್ರಾಮದಲ್ಲಿ ಜಿಪಂ ಹಾಗೂ ಜಿಲ್ಲಾ ಆಡಳಿತ ಗದಗ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ವಸತಿ ಕೊಠಡಿ ಮತ್ತು ಅಡುಗೆ ಕೊಠಡಿಗೆ ಭೇಟಿ ನೀಡಿ ದವಸ, ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು. ಶಾಲಾ ಮಕ್ಕಳ ಜತೆ ಬಿಸಿಯೂಟ ಸವಿದು ಅಂಗನವಾಡಿ ಮಕ್ಕಳಲ್ಲಿ ಕಲಿಕಾ ಗುಣಮಟ್ಟ ಪರೀಕ್ಷಿಸಿದರು.

ಜಿಪಂ ಸಿಇಒ ಶಿರೋಳ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಮಕ್ಕಳ ಮಧ್ಯಾಹ್ನದ ಪಲಾವ್ ಮತ್ತು ಮೊಟ್ಟೆ ಸವಿದು ಶಾಲಾ ಮಕ್ಕಳ ಜತೆ ಸಮಾಲೋಚನೆ ನಡೆಸಿ ಪ್ರತಿನಿತ್ಯ ಮಕ್ಕಳಿಗೆ ಕೊಡುವ ಆಹಾರದ ಕುರಿತು ಮಾಹಿತಿ ಪಡೆದರು. ಆಹಾರದ ರುಚಿ ಪ್ರತಿನಿತ್ಯ ಹೇಗಿರುತ್ತೆ ಅಂತ ಮಕ್ಕಳಿಂದ ಮಾಹಿತಿ ಪಡೆದರು. ಅಲ್ಲದೆ ಊಟದ ಜತೆ ಶಿಕ್ಷಕರು ಹೇಳುವ ಪಾಠದ ಬಗ್ಗೆ ಆಸಕ್ತಿ ವಹಿಸಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾರ್ಗದರ್ಶಿಸಿದರು. ಊಟದ ಬಳಿಕ ಬಿಸಿಯೂಟ ಸಿಬ್ಬಂದಿ ಜೊತೆ ಮಾತನಾಡಿ ಆಹಾರ ಗುಣಮಟ್ಟ ಕಾಪಾಡಿಕೊಂಡು ಹೋಗುವಂತೆ ಸೂಚಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಧಿಕಾರಿ ಡಾ.ಗುರುನಾಥ ಹೂಗಾರ, ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ್, ಸಹಾಯಕ ನಿರ್ದೇಶಕ (ಗ್ರಾಉ) ಸಂತೋಷಕುಮಾರ್ ಪಾಟೀಲ್, ಶಿರೋಳ ಪಿಡಿಒ ವೈ.ಬಿ. ಸಂಕನಗೌಡರ, ಪಿಆರ್.ಇಡಿ ಎಇಇ ನಿಂಗಪ್ಪ ಬೇವಿನಗಿಡದ, ಮಂಜುನಾಥ ಗಣಿ, ವಿ.ಆರ್. ರಾಯನಗೌಡರ, ಹನಮಂತ ಡಂಬಳ, ಸುರೇಶ ಬಾಳಿಕಾಯಿ, ಅಲ್ತಾಫ್‌ ಅಮ್ಮಿನಬಾವಿ, ಮಲ್ಲಪ್ಪ ಕಟ್ಟಮನಿ, ಹುಚ್ಚಪ್ಪ ಕಟ್ಟಿ ಹಾಗೂ ಗ್ರಾಪಂ ಸಿಬ್ಬಂದಿ ವರ್ಗ ಇದ್ದರು.

Share this article