- ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ, ಶ್ರೀರಾಮನ ಕುರುಹುಗಳನ್ನು ಜಗತ್ತಿಗೆ ಪರಿಚಯಿಸಿದ ಅವರು ಶ್ರೇಷ್ಠ ದೈವಾಂಶಸಂಭೂತರು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಬಣ್ಣಿಸಿದರು.ಮಂಗಳವಾರ ಪಟ್ಟಣದ ಎಲ್.ಐ.ಸಿ. ಕಚೇರಿ ಬಳಿ ಇರುವ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯ ನಂಬಿಕಸ್ತ ಸಮಾಜವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವನ್ನು ಇಟ್ಟು ನನ್ನನ್ನು ಬೆಂಬಲಿಸಿದೆ. ನಿಮ್ಮಗಳ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ನಿವೇಶನಕ್ಕಾಗಿ ಮನವಿ ಸಲ್ಲಿಸಿದ್ದು, ನಿವೇಶನ ಮಂಜೂರು ಮಾಡಲು ಈ ದಿನವೇ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದು ಸಮುದಾಯ ಸಮಾಜದ ಮುನ್ನಲೆಗೆ ಬರಬೇಕಾದರೆ ಶಿಕ್ಷಣ ಅವಶ್ಯಕವಾಗಿ ಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕಡ್ಡಾಯವಾಗಿ ಕೊಡಿಸಬೇಕು ಎಂದರು.ತಾಲೂಕು ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ನಮ್ಮ ನಾಯಕ ಸಮಾಜದವರು ತಾಲೂಕಿನ 145 ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಶೋಷಿತ ಸಮುದಾಯಗಳಿಗೆ ಮನ್ನಣೆ ಸಿಗಬೇಕಾದರೆ ಶಿಕ್ಷಣ ಬಹಳ ಮುಖ್ಯವಾಗಿದೆ. ನಮ್ಮ ಸಮುದಾಯದ ಮಕ್ಕಳು ಚನ್ನಗಿರಿ ನಗರದಲ್ಲಿ ಇದ್ದು ಕೊಂಡು ವಿದ್ಯಾಭ್ಯಾಸ ಮಾಡಲು ಹಾಸ್ಟೆಲ್ ಅವಶ್ಯಕತೆ ಇದೆ. ಹಾಸ್ಟೆಲ್ ನಿರ್ಮಾಣಕ್ಕೆ ಶಾಸಕರು ನಿವೇಶವ ನೀಡಿದರೆ ನಮ್ಮ ಸಮುದಾಯ ಶೈಕ್ಷಣಿಕವಾಗಿ ಮುಂದುವರಿಯಲು ಸಹಾಯಕವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಜೀವವೈವಿಧ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಜಿಪಂ ಮಾಜಿ ಸದಸ್ಯ ಲೋಕೇಶ್ವರ್, ತಾಪಂ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಪುರಸಭೆ ಸದಸ್ಯ ಜಿತೇಂದ್ರರಾಜ್, ಗಾದ್ರಿ ಬಸವರಾಜ್, ಪಟ್ಲಿ ನಾಗರಾಜ್, ಕಾಫಿಪುಡಿ ಶಿವಾಜಿ ರಾವ್, ಜಯರಾಂ, ತಿಪ್ಪೇಶಪ್ಪ, ನಿವೃತ್ತ ಆರ್.ಎಫ್.ಒ. ವೀರೇಶ್ ನಾಯ್ಕ್, ರಾಮಚಂದ್ರ ಮೂರ್ತಿ, ಪಿ.ಬಿ. ನಾಯಕ, ಲೋಹಿತ್ ಕುಮಾರ್, ಸಿದ್ದೇಶ್, ಬುಳಸಾಗರ ನಾಗರಾಜ್, ಜೋಳದಾಳ್ ಕುಮಾರ್ ತಳವಾರ್, ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ರುದ್ರೇಶ್, ರವೀಂದ್ರಕುಮಾರ್ ಅಥರ್ಗಾ ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.- - -
-7ಕೆಸಿಎನ್‌ಜಿ1:ಚನ್ನಗಿರಿ ಪಟ್ಟಣದ ಎಲ್.ಐ.ಸಿ. ಕಚೇರಿ ಬಳಿ ಇರುವ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಉದ್ಘಾಟಿಸಿದರು.