ಕಾರ್ಮಿಕರು ದೇಶದ ಅಭಿವೃದ್ಧಿಯ ಆಧಾರಸ್ತಂಭ

KannadaprabhaNewsNetwork |  
Published : Sep 22, 2024, 01:56 AM IST
ಕ್ಯಾಪ್ಷನಃ21ಕೆಡಿವಿಜಿ31ಃದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣನವರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ನ್ಯಾ.ಮಹಾವೀರ ಮಕರೆಣ್ಣನವರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾರ್ಮಿಕರು ದೇಶದ ಅಭಿವೃದ್ಧಿಯ ನೈಜ ಆಧಾರಸ್ತಂಭವಾಗಿದ್ದು ಇವರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕಾಗಿ ಕಾರ್ಮಿಕ ವರ್ಗ ನೆಮ್ಮದಿಯಾಗಿರಲೆಂದು ಸರ್ಕಾರ ಅವರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು, ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ್ ತಿಳಿಸಿದರು.

ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ದಾವಣಗೆರೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಲಾದ ದಾವಣಗೆರೆ ಜಿಲ್ಲೆಯ ಉದ್ಯೋಗದಾತರಿಗೆ, ಹೊರಗುತ್ತಿಗೆ ಏಜನ್ಸಿಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಕಾನೂನುಗಳು ಮತ್ತು ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸಲು ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರೆಂಬ ಯಂತ್ರದಿಂದ ಸಮಾಜ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಒಂದು ಪಕ್ಷ ಕಾರ್ಮಿಕ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದರೆ ಅನೇಕ ರೀತಿಯಲ್ಲಿ ತೊಂದರೆ ಎದುರಾಗುತ್ತದೆ. ಆದ್ದರಿಂದ ಕಾರ್ಮಿಕ ವರ್ಗದವರ ಜೀವನ ಮಟ್ಟ ಉತ್ತಮವಾಗಿರಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಅವರಿಗಾಗಿ ನೀಡಿದೆ. ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಟ್ಟು, ಕಾರ್ಮಿಕ ಇಲಾಖೆ ಅವರಿಗೆ ಸಹಕಾರ ನೀಡಲು ಸಜ್ಜಾಗಿದೆ, ಕಾರ್ಮಿಕರು ಇದರ ಫಲ ಪಡೆಯಬೇಕು ಎಂದು ತಿಳಿಸಿದರು.

ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕ ಇಲಾಖೆಯಿಂದ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು. ಕಾರ್ಮಿಕರು ತಮ್ಮ ಕುಟುಂಬದ ಜವಾಬ್ದಾರಿ ವ್ಯಕ್ತಿಗಳಾಗಿರುವ ನೀವು ಜಾಗೃತರಾಗಿ ಇತರರಿಗೂ ಮಾಹಿತಿ ತಿಳಿಸಬೇಕು. ತಮಗೆ ಅನ್ವಯವಾಗುವ ಯೋಜನೆಗಳಿಗೆ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು, ಸುಳ್ಳು ನೋಂದಣಿಗಳು ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ ಮಾತನಾಡಿ, ಈ ಕಾರ್ಯಾಗಾರವು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕಾದರೆ ಕಾರ್ಮಿಕ ಹಾಗೂ ವಿವಿಧ ಸಂಘಟನೆಗಳ, ಹಕ್ಕುಗಳು ಪರವಾಗಿ ಹೋರಾಟ ಮಾಡುತ್ತಿರುವ ಮುಖಂಡರಿಗೆ ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಇರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರಾಜಗೋಪಾಲ್ ವಿವಿಧ ಕಾರ್ಮಿಕ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಅಧಿಕಾರಿ ಮಂಜಪ್ಪ ಬಾಲ ಕಾರ್ಮಿಕ ಕಾಯ್ದೆ ಸೇರಿದಂತೆ ಕಾರ್ಮಿಕರಿಗೆ ದೊರೆಯುವ ಸೌಲಭ್ಯ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಕಾರ್ಮಿಕ ಸಹಾಯಕ ಆಯುಕ್ತರಾದ ಡಾ.ಅವಿನಾಶ್ ನಾಯ್ಕ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಜಿಲ್ಲಾ ಬಾಲ ಕಾರ್ಮಿಕ ಯೊಜನಾ ನಿರ್ದೇಶಕ ಇ.ಎನ್.ಪ್ರಸನ್ನಕುಮಾರ, ಕಾರ್ಮಿಕ ಸಂಘದ ಮಾಲೀಕರ, ಅಧ್ಯಕ್ಷರು, ಸಂಘಟಿತ ಮತ್ತು ಅಸಂಘಟಿತ ಪದಾಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು