ಕುಷ್ಟಗಿ:
ತಾಲೂಕಿನ ಗುಮಗೇರಾ ಗ್ರಾಮದ ಸಮೀಪದ ಸೋಲಾರ ಪ್ಲಾಂಟ್‌ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮೂರು ತಿಂಗಳ ವೇತನ, ಉದ್ಯೋಗ ಭದ್ರತೆ, ಪಿಎಫ್, ಇಎಸ್ಐ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಕಾರ್ಮಿಕ ಪರಸಪ್ಪ ಅಳ್ಳಳ್ಳಿ ಮಾತನಾಡಿ, ಮೂರು ತಿಂಗಳಿಂದ ವೇತನ ಪಾವತಿಸಿಲ್ಲ. ಉದ್ಯೋಗ ಭದ್ರತೆ, ಪಿಎಫ್, ಇಎಸ್ಐ ಸೇರಿದಂತೆ ವಿವಿಧ ಸೌಲಭ್ಯವಿಲ್ಲದೆ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಯಾರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಎಂಟು ವರ್ಷದಿಂದ ನಾವು ಸೋಲಾರ್ ಯುನಿಟ್‌ನಲ್ಲಿ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಆಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಕಂಪನಿ ಮುಖ್ಯಸ್ಥರು ಮತ್ತು ಘಟಕದ ಅಧಿಕಾರಿಗಳು ಸರಿಯಾಗಿ ವೇತನ ಪಾವತಿಸುತ್ತಿಲ್ಲ. ವೇತನದೊಂದಿಗೆ ಜಮಾ ಮಾಡಬೇಕಿದ್ದ ಪಿಎಫ್ ಮತ್ತು ಇಎಸ್ಐ ಮೊತ್ತ ನೀಡಿಲ್ಲ ಎಂದು ದೂರಿದರು.ಗ್ರಾಮೀಣ ಪ್ರದೇಶದಿಂದ ಬಂದ ನಾವು ಕಂಪನಿ ನೀಡುವ ವೇತನ ಅವಲಂಭಿಸಿ ಜೀವನ ಸಾಗಿಸುತ್ತಿದ್ದೇವೆ, ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು ಅಧಿಕಾರಿಗಳು ಕೆಲಸದಿಂದ ವಜಾಗೊಳಿಸುವ ಹಾಗೂ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸುವುದಾಗಿ ಪೊಲೀಸರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಸಂಘಟನೆಗಳ ಬೆಂಬಲ:ಸೋಲಾರ್ ಪ್ಲಾಂಟ್‌ನಲ್ಲಿ ನಿರ್ವಹಿಸುವ ಕಾರ್ಮಿಕರ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿ ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಈ ವೇಳೆ ಚನ್ನಪ್ಪ ನಾಲಗಾರ, ಬಸವರಾಜ ಗಾಣಿಗೇರ, ಕಿರಣಜ್ಯೋತಿ, ಶ್ರೀನಿವಾಸ ಕಂಟ್ಲಿ, ಸಂತೋಷ ಕಂದಕೂರು, ನವೀನಕುಮಾರ, ರಾಚೋಟಯ್ಯ, ಅಮರೇಶ, ಶರಣಪ್ಪ ಅಳ್ಳಳ್ಳಿ, ಆಂಜನೇಯ, ಹುಸೇನಸಾಬ್, ಮಾರುತೇಶ, ಬೀರಪ್ಪ, ಹನಮೇಶ ಸೇರಿದಂತೆ ಅನೇಕರು ಇದ್ದರು.