ಬಾಕಿ ವೇತನಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Dec 28, 2023, 01:46 AM IST
ಸಿಕೆಬಿ- 4 ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಯ  ಕಾರ್ಮಿಕರ ಬಾಕಿ ವೇತನಕ್ಕೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಎನ್ ಎಸ್ ಎಲ್ ಶುಗರ್ ಕಾರ್ಖಾನೆಯಲ್ಲಿ ಕಾರ್ಖಾನೆಯ ಸ್ಕ್ರಾಪ್ ಮತ್ತು ಯಂತ್ರೋಪಕರಣಗಳ ಸಾಗಾಣೆ

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಎನ್ ಎಸ್ ಎಲ್ ಶುಗರ್ ಕಾರ್ಖಾನೆ । ಕಾರ್ಖಾನೆಯ ಸ್ಕ್ರಾಪ್ ಮತ್ತು ಯಂತ್ರೋಪಕರಣಗಳ ಸಾಗಾಣೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗೌರಿಬಿದನೂರು ನಗರ ಹೊರವಲಯದಲ್ಲಿರುವ ಎನ್.ಎಸ್.ಎಲ್ ಶುಗರ್ ಸಕ್ಕರೆ ಕಾರ್ಖಾನೆಯವರು ಯಂತ್ರೋಪಕರಣ ಮತ್ತು ಸ್ಕ್ರ್ಯಾಪ್ ಗಳನ್ನು ನ್ಯಾಯಾಲಯದ ಆದೇಶದ ವಿರುದ್ಧವಾಗಿ ಮಾರಿ ಸರ್ಕಾರಕ್ಕೆ ಜಿಎಸ್‍ಟಿ ಹಾಗೂ ಕಾರ್ಮಿಕರಿಗೆ ಬಾಕಿ ವೇತನವನ್ನು ಪಾವತಿಸದೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಕ್ಕರೆ ಕಾರ್ಖಾನೆಯ ಮಾಜಿ ಕಾರ್ಮಿಕರು ಕಾರ್ಖಾನೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಎಸ್.ಮೋಹನ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕರ್ನಾಟಕ ಉಚ್ಛ ನ್ಯಾಯಾಲವು ದಿನಾಂಕ 25-03-2013 ರ ಆದೇಶವನ್ನು ಕಾರ್ಖಾನೆಯವರು ಉಲ್ಲಂಘಿಸಿ ಕಾರ್ಖಾನೆಯ ಯಂತ್ರೋಪಕರಣಗಳನ್ನು 23 ಕೋಟಿಗೆ ಖಾಸಗಿಯವರಿಗೆ ಮಾರಿದ್ದಾರೆ. ಕಾರ್ಖಾನೆಯ 567 ಕಾರ್ಮಿಕರಿಗೆ 70 ಕೋಟಿ ರು. ವೇತನ ಬಾಕಿಯಿದ್ದು, ಇದರಲ್ಲಿ ಅಸಲು 36 ಕೋಟಿ ನ್ಯಾಯಾಲಯದ ಆದೇಶದಂತೆ ಶೇ.12 ರಷ್ಟು ಬಡ್ಡಿ ಸೇರಿ ಒಟ್ಟು 70 ಕೋಟಿ ರು. ಬಾಕಿಯಿದೆ. ಕಾರ್ಮಿಕರಿಗೆ ಈ ಹಣವನ್ನು ನೀಡಬೇಕು ಎಂದು ಈ ಹಿಂದೆಯೇ ನ್ಯಾಯಾಲಯವು ಆದೇಶ ನೀಡಿದೆ ಎಂದು ಹೇಳಿದರು.

ಮುಖಂಡ ಜಿ.ಆರ್.ನವೀನ್ ಕುಮಾರ್ ಮಾತನಾಡಿ, ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಯವರು ಕಾರ್ಮಿಕರ ವೇತನ ಹಾಗೂ ಸರಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ವಂಚಿಸಿ, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಕಾರ್ಖಾನೆಯಲ್ಲಿನ ಸ್ಕ್ರಾಪ್ ಮತ್ತು ಯಂತ್ರೋಪಕರಣಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ, ಖಾಸಗಿಯವರು ರಾತ್ರೋ ರಾತ್ರಿ ಸಾಗಾಣಿಕೆ ಮಾಡುತ್ತಿದ್ದಾರೆ, ಕಾರ್ಖಾನೆಯನ್ನು ಯಥಾಸ್ಥಿತಿಯಲ್ಲಿ ಉಳಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಅಕ್ರಮವಾಗಿ ಕಾರ್ಖಾನೆಯಲ್ಲಿ ಸ್ಕ್ರಾಪ್ ಸಾಗಾಣಿಕೆಯಾಗುತ್ತಿದೆ, ಕಾರ್ಮಿಕರಿಗೆ ಬಾಕಿ ವೇತನವನ್ನು ಪಾವತಿಸಿ ನಂತರ ಕಾರ್ಖಾನೆಯವರು ಮುಂದಿನ ವ್ಯವಹಾರ ಮಾಡಲಿ ಎಂದು ಅಗ್ರಹಿಸಿದರು.

ಸ್ಥಳಕ್ಕೆ ವೃತ್ತನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಎಸ್ಸೈ ರಮೇಶ್‍ಗುಗ್ಗರಿ ಭೇಟಿ ನೀಡಿ, ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಅಮರನಾಥ್ ಅವರನ್ನು ಕರೆಸಿ ವಿಚಾರಿಸಿದಾಗ, ಅಮರನಾಥ್ ಅವರು ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಖಾನೆಯಲ್ಲಿ ಸ್ಕ್ರಾಪ್ ಮತ್ತು ಯಂತ್ರೋಪಕರಣಗಳನ್ನು ಮಾರಾಟ ಮಾಡಿ ಸಾಗಾಣಿಕೆ ಮಾಡುತ್ತಿದೆ, ಈ ಸಂಬಂದ ನ್ಯಾಯಾಲಯದ ದಾಖಲೆ ಇದೆ ಎಂದು ತಿಳಿಸಿದರು, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ನಿಮ್ಮಲ್ಲಿರುವ ದಾಖಲೆಗಳನ್ನು ತಂದು ತೋರಿಸಿ. ಅದು ಕಾನೂನುಬದ್ಧವಾಗಿದ್ದಲ್ಲಿ ನೀವು ಸ್ಕ್ರಾಪ್ ಸಾಗಾಣಿಕೆ ಮಾಡಿ. ಅಲ್ಲಿಯವರೆಗೆ ಈ ಸಾಗಾಣಿಕೆ ನಿಲ್ಲಿಸುವಂತೆ ಸೂಚಿಸಿದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ಕಾರ್ಮಿಕರಾದ ರವಿಕುಮಾರ್, ನಟರಾಜ್, ವೆಂಕಟೇಶ್, ಜಿ.ಶ್ರೀನಿವಾಸ್, ಮೀರ್ಜಾ ಅಕ್ಬರ್ ಆಲಿ, ಆರ್.ರಾಜಣ್ಣ, ಗಂಗಾಧರಪ್ಪ, ನರಸಿಂಹಯ್ಯ, ವಿ.ಬಾಲಾಜಿ, ಜಿ.ಅಶ್ವತ್ಥಪ್ಪ, ಅನಿಲ್. ಮಧುಕುಮಾರ್.ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿದ್ದರು.---ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಯ ಕಾರ್ಮಿಕರ ಬಾಕಿ ವೇತನಕ್ಕೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ