- ರೈತರ ಕೈ ಬಲಪಡಿಸುವುದೇ ಸರ್ಕಾರದ ಉದ್ದೇಶ । ವಿದ್ಯುತ್ ಉಪಕೇಂದ್ರ ಉದ್ಘಾಟನೆ
ಸೋಲಾರ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಖಾಂಡ್ಯ ಹೋಬಳಿಯ ಜೇನುಗದ್ದೆಯಲ್ಲಿ ಕೆಪಿಟಿಸಿಎಲ್‌ನಿಂದ ನೂತನವಾಗಿ ನಿರ್ಮಾಣಗೊಂಡ 66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಭೂಮಿ ಇದ್ದಲ್ಲಿ ಸೋಲಾರ್ ಉತ್ಪಾದನಾ ಕೇಂದ್ರ ಆರಂಭಿಸಲಾಗುವುದು. ಖಾಸಗಿ ಭೂಮಿ ದೊರೆತಲ್ಲಿ ಲೀಸ್‌ಗೆ ಪಡೆದು ಅಲ್ಲೂ ಸಹ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರತೀ ಕೇಂದ್ರದಲ್ಲಿ ತಲಾ 750 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗುವುದು ಎಂದರು.
ರೈತರ ಕೈ ಬಲಪಡಿಸುವುದೇ ಸರ್ಕಾರದ ಮೂಲ ಗುರಿ, ರೈತರು ಬೆಳೆದ ಆಹಾರ ಧಾನ್ಯಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆತಾಗ ಅವರು ಯಾವುದನ್ನೂ ನಿರೀಕ್ಷೆ ಮಾಡಲ್ಲ. ಆಹಾರ ಉತ್ಪಾದನೆ ಕುಂಠಿತಗೊಂಡಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೆ ಇಳಿಯಲಿದೆ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಖಾಂಡ್ಯ ಹೋಬಳಿ ಜನರ ಬಹುದಿನದ ಬೇಡಿಕೆ ಇದೀಗ ಉಪಕೇಂದ್ರ ಉದ್ಘಾಟನೆ ಮೂಲಕ ಸಾಕಾರಗೊಂಡಿದೆ. ಹಲವಾರು ಗ್ರಾಮಗಳಿಗೆ ಇದರ ಉಪಯೋಗ ವಾಗಲಿದ್ದು, ಈ ಹಿಂದೆ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಸುನೀಲ್‌ಕುಮಾರ್, ಹಾಲಿ ಸಚಿವ ಕೆ.ಜೆ.ಜಾರ್ಜ್ ಅವರ ಶ್ರಮದ ಫಲ ಇದಾಗಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಬೆಳೆಗಾರರಿಗೆ 10 ಹೆಚ್‌ಪಿವರೆಗಿನ ಉಚಿತ ವಿದ್ಯುತ್ತನ್ನು ಹಾಲಿ ಸರ್ಕಾರ ಜಾರಿಗೆ ತಂದಿದ್ದು, ರೈತರು ಈ ಹಿಂದಿನ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಯೋಜನೆ ಲಾಭ ಪಡೆಯಬಹುದು. ಯೋಜನೆ ಫಲಾನುಭವಿ ಯಾಗುವವರು 10 ಅಶ್ವ ಶಕ್ತಿವರೆಗಿನ ವಿದ್ಯುತ್ ಉಪಯೋಗಿಸಿ ಇಲಾಖೆಗೆ ಬಿಲ್ ಪಾವತಿಸಿದಲ್ಲಿ ಡಿಬಿಟಿ ಮೂಲಕ ವಾಪಾಸ್ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.
ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಸುರೇಶ್ ಮಾತನಾಡಿ, ಖಾಂಡ್ಯ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಹಿನ್ನೆಲೆ ಆರಂಭಿಸಿರುವ ನೂತನ ಉಪಕೇಂದ್ರದಿಂದ ಹತ್ತಾರು ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಿದೆ. ರು.12.95 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದರು.
ವಿದ್ಯುತ್ ಉತ್ಪಾದನೆ ಕುಂಠಿತವಾಗಿಲ್ಲ: ಸಚಿವ
ರಾಜಕೀಯ ಬೇಡ: ಪ್ರತಿಯೊಂದಕ್ಕೂ ರಾಜಕೀಯ ಮಾಡುವುದು ಬೇಡ. ಯಾವುದೇ ಕಾಮಗಾರಿಯ ಉದ್ಘಾಟನೆಯನ್ನು ಸಚಿವರು ಮಾಡಲಿ ಎಂದು ಅಧಿಕಾರಿಗಳು, ಶಾಸಕರು ಕಾಯುವುದು ಬೇಡ. ಅಧಿಕೃತವಾಗಿ ಶಾಸಕರ ಮೂಲಕವೇ ಉದ್ಘಾಟನೆ ಮಾಡಿಸಿ, ಜನರಿಗೆ ಯಾವುದೇ ರೀತಿ ತೊಂದರೆಗಳು ಆಗುವುದು ಬೇಡ. ಜನರ ಪರ ಕೆಲಸ ಮಾಡಿದರೆ ಅವರು ನಮ್ಮ ಪರ ಪ್ರೀತಿ ವಿಶ್ವಾಸ ತೋರಿಸಲಿದ್ದಾರೆ ಎಂದರು.೨೭ಬಿಹೆಚ್‌ಆರ್ ೧, ೨:
ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಜೇನುಗದ್ದೆಯಲ್ಲಿ ಕೆಪಿಟಿಸಿಎಲ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡ 66/11 ವಿದ್ಯುತ್ ವಿತರಣಾ ಉಪಕೇಂದ್ರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ಎಸ್.ವಿ.ಮಂಜುನಾಥ್, ಶೀಲಾವತಿ ಇದ್ದರು.