ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಮಠದ ಆವರಣದಲ್ಲಿ ಸ್ವಚ್ಛತಾ ಸೇವೆಗೈಯುತ್ತಿರುವ ಸೇವಾ ಸಿಬ್ಬಂದಿ ಲಕ್ಷ್ಮಿ, ನಾಗಮ್ಮ, ಬರಮವ್ವ, ಶೋಭಾ, ಲಕ್ಷ್ಮವ್ವ, ಈರಮ್ಮ, ಹುಲಿಗೆಮ್ಮ, ನಾಗಮ್ಮ, ಫಕೀರಮ್ಮ, ಗುಂಡಪ್ಪ, ಮಾತಂಗೆವ್ವ ಬಿಡುಗಡೆ ಮಾಡಿದರು.
ಗವಿಮಠ ಜಾತ್ರೆ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ೨೦೨೫ರ ಮಹಾಜಾತ್ರೆಗೆ ಭಕ್ತರನ್ನು ಅಹ್ವಾನಿಸಲಾಗಿದೆ.ಜ. ೧೫, ೧೬ ಹಾಗೂ ೧೭ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮೆರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್ ಬಿಡುಗಡೆಗೊಳಿಸಲಾಗಿದೆ.“ಭಕ್ತಿಯ ಮನೆ ಮನಗಳಲ್ಲಿ
ಓಂಕಾರವು ಕೋಟೆ ಕಟ್ಟಿ
ಸಿದ್ದ ಪುರುಷ ಗವಿಸಿದ್ದನೇ
ಜಾತ್ರೋತ್ಸವ ನಮ್ಮ ಯಾತ್ರೋತ್ಸವ” ಎಂಬ ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕ್ಕೆ ಜೀವ ತುಂಬುವ ಕಂಠಸಿರಿ ಕೊಪ್ಪಳದ ಗಾಯಕ ಸದಾಶಿವ ಪಾಟೀಲರದು. ಈ ಹಾಡಿನಲ್ಲಿ ಗವಿಸಿದ್ಧೇಶ್ವರ ಮಹಾರಥೋತ್ಸವದ ವೈಭವದ ದೃಶ್ಯ, ಶಿವಶಾಂತವೀರ ಹಾಗೂ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶ ಒಳಗೊಂಡಿದೆ. ತೆಪ್ಪೋತ್ಸವ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ ಪೂರ್ಣ ಪುಣ್ಯಕಾರ್ಯಗಳು ಇದರಲ್ಲಿ ಅಂತರ್ಗತವಾಗಿವೆ.
ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶ್ರೀ ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ನುಡಿ ಸೇವೆಗೈಯುವುತ್ತಿರುವಯದು ಮತ್ತೊಂದು ವೈಶಿಷ್ಟ್ಯ. ಸುಮಾರು ೧೫೦೦ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಸಾವಿರಾರು ಮೇಣದ ದೀಪಗಳು ಹಾಗೂ ಪೇಪರ್ ಗ್ಲಾಸುಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿರುವ ವೀಡಿಯೋ ಟ್ರೇಲರ್ ಸಾಂಗ್‌ನೊಂದಿಗೆ ಶ್ರೀಮಠದ ಭಕ್ತರಿಗೆ ಜಾತ್ರೆಗೆ ಆಹ್ವಾನ ನೀಡಲಾಗಿದೆ.