ಕನ್ನಡಪ್ರಭ ವಾರ್ತೆ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ನಗರದ ಯಡಿಯೂರು ವಾರ್ಡಿನ ಐತಿಹಾಸಿಕ ಕೆರೆಯ ಎದುರು ನಿರ್ಮಿಸಿರುವ ಹವಾನಿಯಂತ್ರಿತ ಅ.ನ.ಕೃ ಸಮುದಾಯ ಭವನ ಮತ್ತು ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ಲೋಕಾರ್ಪಣೆ ಕಾರ್ಯಕ್ರಮವು ಸೋಮವಾರ ಜರುಗಲಿದೆ.ಬೆಳಗ್ಗೆ 10.30ಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಸಮುದಾಯ ಭವನ ಮತ್ತು ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಕಲ್ಯಾಣ ಮಂಟಪಗಳ ಬಾಡಿಗೆ ದರವ ದಿನವೊಂದಕ್ಕೆ ಕನಿಷ್ಠ ಐದಾರು ಲಕ್ಷ ರು.ಗೂ ಹೆಚ್ಚಾಗಿರುವ ಕಾರಣ ಮಧ್ಯಮ, ಕೆಳಮಧ್ಯಮ, ಬಡ ಕುಟುಂಬಗಳ ಸದಸ್ಯರ ವಿವಾಹ, ನಿಶ್ಚಿತಾರ್ಥ, ಆರತಕ್ಷತೆ ಮೊದಲಾದ ಶುಭಕಾರ್ಯಗಳನ್ನು ಮಾಡುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಕಲ್ಯಾಣ ಮಂಟಪ ದೊರಕಿಸಿಕೊಡುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಈ ಹವಾನಿಯಂತ್ರಿತ ಅ.ನ.ಕೃ ಸಮುದಾಯದ ಭವನ ನಿರ್ಮಿಸಲಾಗಿದೆ.ಅಂತೆಯೆ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸಾಂಸ್ಕೃತಿಕ, ರಂಗಭೂಮಿ ಕಾರ್ಯಕ್ರಮಗಳು, ಶಾಲಾ-ಕಾಲೇಜು ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ನಿರ್ಮಿಸಲಾಗಿದೆ. ಇದೀಗ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.