ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಜೆಡಿಎಸ್ ಎಸ್‍ಟಿ ಘಟಕದ ಅಧ್ಯಕ್ಷರಾಗಿ ಎಚ್.ಆರ್. ಹನುಮಂತಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ವಿಪಕ್ಷಗಳ ಮಾತುಗಳು ಬೇರೆಯೇ ಇದೆ. ಆದರೂ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಳ್ಳೆಯ ಖಾತೆಯನ್ನು ಕೊಟ್ಟು ತಮ್ಮ ಔದಾರ್ಯ ತೋರಿದ್ದಾರೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು, ಕುಮಾರಣ್ಣ ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವುದು ಪಕ್ಷದ ಕಾರ್ಯಕರ್ತರ ಅಭಿಲಾಷೆ ಆಗಿದೆ. ಹಾಗಾಗಿ ಮೈತ್ರಿ ನಡುವೆ ಕೆಲವು ಗೊಂದಲಗಳು ಇವೆ. ಇದೇ ಕಾರಣಕ್ಕೆ ಮೈತ್ರಿ ನಂಬಿಕೊಳ್ಳದೆ ಸ್ವಂತಂತ್ರವಾಗಿ ಚುನಾವಣೆ ಎದುರಿಸುವುದಕ್ಕೂ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕಿದೆ ಎಂದರು.
ಎನ್‍ಡಿಎ ಜತೆಗಿನ ಮೈತ್ರಿ ಬಗ್ಗೆ ನಮ್ಮದೇನು ತಕರಾರು ಇಲ್ಲ, ಮೈತ್ರಿ ಮುಂದುವರೆದರೆ ಸಂತೋಷ, ಮುಂದುವರೆದಿದ್ದರೂ ನಾವು ನಮ್ಮ ಸ್ವಂತ ಶಕ್ತಿ ಮೇಲೆ ಚುನಾವಣೆಗಳನ್ನು ಎದುರಿಸುವುದಕ್ಕೆ ಸಿದ್ದರಾಗಬೇಕಿದೆ. ಮುಂದೆ ಸ್ಥಳೀಯ ಸಂಸ್ಥೆಗಳು, ಆನಂತರ ವಿಧಾನಸಭಾ ಚುನಾವಣೆಗಳು ಬರುತ್ತವೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಮೈ ಮರೆತು ಕೂರಬಾರದು. ಪಕ್ಷದ ಸಂಘಟನೆಗೆ ದುಡಿಯಬೇಕು. ಈಗಿನಿಂದಲೇ ನಿಮ್ಮನಿಮ್ಮ ವಾರ್ಡುಗಳು, ಪಂಚಾಯಿತಿಗಳು ಹಾಗೂ ಬೂತ್ ಮಟ್ಟದಲ್ಲಿ ಸಂಘಟನೆಗೆ ಶ್ರಮಿಸಬೇಕಿದೆ ಎಂದು ಹೇಳಿದರು.ಇದೇ ವೇಳೆ ಜಿಲ್ಲಾ ಜೆಡಿಎಸ್ ಎಸ್‍ಟಿ ಘಟಕದ ನೂತನ ಅಧ್ಯಕ್ಷ ಎಚ್.ಆರ್.ಹನುಮಂತಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಎಸ್‍ಟಿ ಸಮಾಜಕ್ಕೆ ಜೆಡಿಎಸ್ ಪಕ್ಷದ ಕೊಡುಗೆ ದೊಡ್ಡದು. ಹರಿಹರದ ರಾಜನಹಳ್ಳಿ ಮಠಕ್ಕೂ ಪಕ್ಷದ ವರಿಷ್ಠರಾದ ಎಚ್. ಡಿ. ದೇವೇಗೌಡರು ತಮ್ಮದೇ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಎಸ್‍ಟಿ ಸಮಾಜಕ್ಕೆ ಮೀಸಲಾತಿ ಕೊಡುವಲ್ಲೂ ಅವರು ಶ್ರಮಿಸಿದ್ದಾರೆ. ಹಾಗಾಗಿ ಎಸ್‍ಟಿ ಸಮಾಜವನ್ನು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರುವಂತೆ ಮಾಡಬೇಕಿದೆ ಎಂದರು.
ವಾಲ್ಮೀಕಿ ಸಮಾಜದ ಕೊಡುಗೆ ಸಾಕಷ್ಟಿದೆ. ಜೆಡಿಎಸ್ ಸರ್ಕಾರ ಇದ್ದಾಗಲೂ ಕೂಡ ನಮ್ಮ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಈಗ ಅನುದಾನದ ಕೊರತೆ ಇದೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ವಿಷಯದ ಬಗ್ಗೆಯೂ ಕೂಡ ನಮ್ಮ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕಾಗಿದೆ. ಒಟ್ಟಾರೆ ಎಲ್ಲರೂ ಸೇರಿ ಪಕ್ಷವನ್ನು ಮತ್ತೆ ಸಂಘಟಿಸಿ ಜಿಲ್ಲೆಯಿಂದ ಕನಿಷ್ಟ ಪಕ್ಷ ಮೂರು ಶಾಸಕರನ್ನಾದರೂ ಗೆಲ್ಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ದಾದಾಪೀರ್ ಸಾಬ್, ಸೋಮಿನಕೊಪ್ಪ ಕಾಂತರಾಜ್, ಸತೀಶ್, ರಾಕೇಶ್ ಡಿಸೋಜ, ಗೀತಾ ಸತೀಶ್, ನರಸಿಂಹ ಗಂಧದಮನೆ, ಮಧುಕುಮಾರ್, ಸುರೇಶ್, ಬೂದಿಗೆರೆ ಬಸವರಾಜ್, ಕೃಷ್ಣಪ್ಪ, ಜಂಬರಘಟ್ಟ ನಾಗಪ್ಪ, ತ್ಯಾಗರಾಜ್, ನಿಖಿಲ್, ಶೀಲಾ ನಾಗರಾಜ್, ಆಶಾ ತಿಪ್ಪೇಶ್ ನಾಯ್ಕ್ ಇದ್ದರು.