ಯಾವ ಮುಖ ಇಟ್ಟುಕೊಂಡು ಸಿಎಂ ಜಿಲ್ಲೆಗೆ ಬರುತ್ತಿದ್ದಾರೆ: ತೀ.ನಾ. ಶ್ರೀನಿವಾಸ್ ಆಕ್ರೋಶ

KannadaprabhaNewsNetwork |  
Published : May 24, 2026, 01:30 AM IST
ಪೋಟೋ: 23ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಸಮಸ್ಯೆಗಳು, ರೈತರ ಸಮಸ್ಯೆಗಳು ರಾಶಿ ರಾಶಿಯಾಗಿ ಇವೆ. ಮುಖ್ಯವಾಗಿ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. 2022ರಲ್ಲಿ ಚುನಾವಣೆಗೂ ಮುನ್ನ ಮಧು ಬಂಗಾರಪ್ಪ ಅವರು ಇವರೆಲ್ಲರಿಗೂ ಹಕ್ಕುಪತ್ರ ಕೊಡುತ್ತೇನೆ ಎಂದು ಆಯನೂರಿನಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡಿದ್ದರು. ಅದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಲೆನಾಡಿನ ರೈತರ ಸಮಸ್ಯೆ ಕುರಿತಂತೆ ಅಧ್ಯಯನ ಸಮಿತಿ ರಚಿಸಿದ್ದರು. ಆ ಸಮಿತಿಯಲ್ಲಿ ನಾನೂ ಇದ್ದೆ. ಸಮಾವೇಶ ನಡೆದ ದಿನವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಸುಮಾರು 10 ಸಾವಿರ ರೈತರ ಎದುರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು ಎಂದರು.

ಅವರು ಮಾತಿನಂತೆ ನಡೆಯಲಿಲ್ಲ. ಸರ್ಕಾರ ಬಂದು ಮೂರು ವರ್ಷ ಕಳೆದರೂ ಸಮಸ್ಯೆಗಳು ಹಾಗೆಯೇ ಉಳಿದಿವೆ. ಸಭೆಗಳು ಕೂಡ ನಡೆದಿಲ್ಲ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಪ್ರಯೋಜಕ ಸಚಿವರಾಗಿದ್ದಾರೆ. ಅರಣ್ಯ ಸಚಿವರಿಗೂ ಏನೂ ಗೊತ್ತಿಲ್ಲ. ಮುಳುಗಡೆ ಸಂತ್ರಸ್ತರ ಸಮಸ್ಯೆಗಳೇ ಇವರಿಗೆ ಅರ್ಥವಾಗಿಲ್ಲ. ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಸುಮ್ಮನಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ 50 ಸಾವಿರ ಜನರ ಹಕ್ಕುಪತ್ರ ವಜಾ ಮಾಡಲು ಕೇಸ್ ಹಾಕಲಾಗಿದೆ. ಶರಾವತಿ, ಅಂಬ್ಲಿಗೊಳ, ಚಕ್ರಾ, ವರಾಹಿ, ಸಾವೆಹಕ್ಲು ಮುಂತಾದ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಭೂಮಿ ಬಿಟ್ಟುಕೊಟ್ಟ ತಪ್ಪಿಗೆ ಸರ್ಕಾರ ಅವರಿಗೆ ಕೇಸ್ ಹಾಕಿದ್ದಾರೆ. ಜಿಲ್ಲೆಯಲ್ಲಿ ಗೋಮಾಳ, ಹುಲ್ಲುಬನಿ, ಕಾನು ಮುಂತಾದ ಪ್ರದೇಶಗಳನ್ನು ಅರಣ್ಯ ಎಂದು ಮಾಡಲಾಗಿದೆ ಎಂದು ಆರೋಪಿಸಿದರು.

ಇಷ್ಟೆಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಲೀ ಯಾವ ಮುಖ ಇಟ್ಟುಕೊಂಡು ಶಿವಮೊಗ್ಗಕ್ಕೆ ಬರುತ್ತಾರೆ. ಇದನ್ನು ರೈತರಾದ ನಾವು ವಿರೋಧಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರುಮೌಲ್ಯಮಾಪನ: ಪಿಯುಸಿಯಲ್ಲಿ ಅನನ್ಯಗೆ ಹೆಚ್ಚುವರಿ 6 ಅಂಕ
ತುಂಗಾ ಮಹಾವಿದ್ಯಾಲಯದಲ್ಲೇ ಡಾ.ಯು.ಆರ್.ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಿ: ಕಲ್ಲೂರು ಮೇಘರಾಜ