ನರಗುಂದ: ಸರ್ಕಾರಿ ಸೌಲಭ್ಯ ಪಡೆಯಲು ಕಾರ್ಮಿಕರ ಕಾರ್ಡ್ ಅವಶ್ಯ. ಮೂರು ವರ್ಷಕ್ಕೊಮ್ಮೆ ಕಾರ್ಡ್ ರಿನಿವಲ್ ಆಗಿದ್ದರೆ ಮಾತ್ರ ಪಿಂಚಣಿ, ಸುರಕ್ಷತಾ ಕಿಟ್ ಸೇರಿದಂತೆ ಹಲವಾರು ಸರ್ಕಾರಿ ಸೌಲಭ್ಯಗಳು ಸಿಗಲಿವೆ ಎಂದು ಕರುನಾಡು ಕಾರ್ಮಿಕರ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಗೌಡ ಹೇಳಿದರು.
ನೊಂದ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಕಾರ್ಮಿಕರ ಕಚೇರಿಗಳಿವೆ. ಕಾರ್ಮಿಕರು ತಾವು ಮಾಡುವ ಕೆಲಸಕ್ಕೆ ಸಂಬಂಧಿಸಿದ ಕಾರ್ಡ್‌ಗಳನ್ನು ಹೊಂದಿರಬೇಕು. ಬೇರೆ ಬೇರೆ ಕಾರ್ಡ್‌ಗಳಿಗೆ ಬೇರೆ ರೀತಿ ಸೌಲಭ್ಯ ಸಿಗಲಿವೆ. ನಿಜವಾಗಿ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಮಾತ್ರ ಕರುನಾಡು ಸಂಘಟನೆ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಲಿದೆ. ಪಿಂಚಣಿ, ಮದುವೆ ಸಹಾಯಧನ, ಅಂತ್ಯಕ್ರಿಯೆಗೆ ಸಹಾಯಧನ ಸರ್ಕಾರದಿಂದ ಸಿಗಲಿದೆ ಎಂದರು.
ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ದುಡಿಯುವ ವರ್ಗಕ್ಕೆ ಗೌರವ ಸಿಗಬೇಕೆನ್ನುವ ಎನ್ನುವ ನಿಟ್ಟಿನಲ್ಲಿ ವಿಶ್ವ ಗುರು ಬಸವಣ್ಣವರು 12ನೇ ಶತಮಾನದಲ್ಲಿ ಪ್ರಯತ್ನ ಮಾಡಿದ್ದಾರೆ. ಸೌಲಭ್ಯಗಳು ನಿಜವಾದ ಕಾರ್ಮಿಕರಿಗೆ ಸಿಗಬೇಕಾಗಿದೆ. ಪ್ರಾಮಾಣಿಕ ಕೆಲಸದ ಹಿಂದೆ ಭಗವಂತ ಇದ್ದಾನೆ. ಕಾರ್ಮಿಕರು ದುಶ್ಚಟದಿಂದ ದೂರವಿರಬೇಕು. ಕಷ್ಟಪಟ್ಟು ದುಡಿದ ಕಾರ್ಮಿಕರು ಕುಟುಂಬದೊಂದಿಗೆ ಸುಂದರವಾದ ಜೀವನ ನಡೆಸಲಿ. ಕಾರ್ಮಿಕರ ಉದ್ಧಾರಕ್ಕೆ ಒಳ್ಳೆಯ ಶಿಬಿರಗಳನ್ನು ಏರ್ಪಡಿಸಿ, ಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀಗೌಡ ಮಾತನಾಡಿ, ದೇಶಕ್ಕೆ ರೈತ, ಸೈನಿಕ ಎಷ್ಟು ಮುಖ್ಯವೋ, ಕಾರ್ಮಿಕನು ಅಷ್ಟೇ ಮುಖ್ಯ. ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆ ಮತ್ತು ಹೋರಾಟ ಅನಿವಾರ್ಯ. ನೊಂದ ಕಾರ್ಮಿಕರ ಜೊತೆ ಈ ಸಂಘಟನೆ ಸದಾ ಇರುತ್ತದೆ ಎಂದು ಹೇಳಿದರು.