ಕನಿಷ್ಠ ಕೂಲಿಗಾಗಿ ಕಾರ್ಮಿಕರ ಧರಣಿ

KannadaprabhaNewsNetwork |  
Published : Feb 02, 2024, 01:00 AM IST
31,500 ರೂ. ಕನಿಷ್ಠ ಕೂಲಿಗೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ | Kannada Prabha

ಸಾರಾಂಶ

ಎಲ್ಲ ಕಾರ್ಮಿಕರಿಗೆ ತಿಂಗಳಿಗೆ ₹31,500 ಕನಿಷ್ಠ ಕೂಲಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾವಿರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ತಿಂಗಳಿಗೆ ₹31,500 ಕನಿಷ್ಠ ಕೂಲಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನೇತೃತ್ವದಲ್ಲಿ ಸಾವಿರಾರು ಜನರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, ವಿವಿಧ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ ನೀಡಿರುವ ಮಾರ್ಗಸೂಚಿ ಮತ್ತು ಆದೇಶಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ಅಸಂಘಟಿತ ಕಾರ್ಮಿಕರಿಗೆ ₹31,500 ಕನಿಷ್ಠ ಕೂಲಿಯನ್ನು ನಿಗದಿಪಡಿಸಬೇಕು. 8 ಗಂಟೆ ಕೆಲಸದ ಅವಧಿ ನಿಯಮವನ್ನು ಮರುಸ್ಥಾಪಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಕೆಎಸ್‌ಆರ್‌ಟಿಸಿ ನೌಕರರ ಹಿಂದಿನ ವೇತನ ಪರಿಷ್ಕರಣೆ, 2018ರಿಂದ ಬಾಕಿ ಇರುವ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಿಯಮಗಳಿಂದ ಕಾರ್ಮಿಕರ ಮುಷ್ಕರದ ಹಕ್ಕು, ಕಾರ್ಖಾನೆಗಳ ತಪಾಸಣೆ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸೌಲಭ್ಯಗಳು ನಾಶವಾಗುತ್ತವೆ. ಕೇಂದ್ರ ಸರ್ಕಾರದ ಬಂಡವಾಳಶಾಹಿ ಉದ್ಯಮ ನೀತಿ, ಪಕ್ಷಪಾತಿ ಧೋರಣೆ ಬಗ್ಗೆ ಕಾರ್ಮಿಕ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಗಿಗ್, ಬೀಡಿ ಮತ್ತು ತೋಟದ ಕಾರ್ಮಿಕರು, ಕೈಗಾರಿಕೆ, ವಿದ್ಯುಚ್ಯಕ್ತಿ, ಸಾರಿಗೆ ಸೇರಿದಂತೆ ಅಸಂಘಟಿತ ವಲಯದ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.

ಒಪಿಎಸ್‌ ಜಾರಿಗೊಳಿಸದಿದ್ದರೆ ಹೋರಾಟ: ಶಿಕ್ಷಕ ಸಂಘ

ಬೆಂಗಳೂರು: ರಾಜ್ಯ ಸರ್ಕಾರ 2006ರ ಏ.1ಕ್ಕೂ ಮೊದಲು ನೇಮಕಗೊಂಡಿರುವ ಅನುದಾನಿತ ಶಾಲಾ ಶಿಕ್ಷಕರಿಗೂ ಹಳೆ ಪಿಂಚಿಣಿ ಯೋಜನೆ (ಒಪಿಎಸ್‌) ಜಾರಿಗೊಳಿಸಬೇಕೆಂದು ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಬೋಧಕ, ಬೋಧಕೇ ತರ ನೌಕರರ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಪಿ.ಕರಬಸಪ್ಪ ಅವರು, 2006ರ ಏ.1ಕ್ಕೂ ಮೊದಲು ಅಧಿಸೂಚನೆ ಹೊರಡಿಸಿ ನೇಮಕಾತಿ ಹೊಂದಿರುವ 13 ಸಾವಿರ ಸರ್ಕಾರಿ ನೌಕರರಿಗೆ ಒಪಿಎಸ್‌ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಇದೇ ರೀತಿ ಹಲವು ಅನುದಾನಿತ ಶಾಲಾ ಶಿಕ್ಷಕರು ಕೂಡ 2006ರ ಏಪ್ರಿಲ್‌ಗೆ ಮುನ್ನ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸರ್ಕಾರವೇ ವೇತನ ನೀಡುತ್ತಿದೆ. ಆದರೆ, ಅವರಿಗೆ ಹೊಸ ಪಿಂಚಿಣಿ ಯೋಜನೆಯೂ ಇಲ್ಲ, ಹಳೆ ಪಿಂಚಿಣಿ ಯೋಜನೆ ಯೂ ಇಲ್ಲದೆ ಅತಂತ್ರರಾಗಿದ್ದಾರೆ. ಸರ್ಕಾರ ಕೂಡಲೇ ಆ ಎಲ್ಲ ಶಿಕ್ಷಕರಿಗೆ ಒಪಿಎಸ್‌ ಜಾರಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಅನುದಾನಿತ ಹಾಗೂ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಚರ್ಚಿಸಲು ಫೆ.3ರಂದು ವಿಜಯನಗರದ ಬಂಟರ ಸಂಘದಲ್ಲಿ ಸಂಘದ ಸಭೆ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!