ಪಕ್ಷದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ: ರಘುಪತಿ ಭಟ್‌

KannadaprabhaNewsNetwork |  
Published : May 25, 2024, 12:46 AM IST
ರಘುಪತಿ | Kannada Prabha

ಸಾರಾಂಶ

ಯಾವ ವಿಚಾರಕ್ಕಾಗಿ ಯಾರು ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಗೊತ್ತಿಲ್ಲ ಆದರೆ ರಾಷ್ಟ್ರೀಯ ವಿಚಾರಧಾರೆ ಮಾತನಾಡುವ, ಹಿಂದುತ್ವಕ್ಕಾಗಿ ಮಾತನಾಡುವವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಈಗ ಅನಿಸುತ್ತಿದೆ ಎಂದು ರಘುಪತಿ ಭಟ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ತನ್ನ ಸಿದ್ಧಾಂತವನ್ನು ಪಾಲಿಸುತ್ತಿಲ್ಲ, ಇತ್ತೀಚೆಗೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಗೆಲ್ಲುವುದಕ್ಕಾಗಿ ನಾನು ಸ್ಪರ್ಧೆಗಿಳಿದಿದ್ದೇನೆಯೇ ಹೊರತು ಯಾರನ್ನೂ ಸೋಲಿಸುವುದಕ್ಕಾಗಿ ಅಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಅಸಮಾಧಾನ ಹೊರಹಾಕಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ನನಗೆ ಟಿಕೆಟ್ ಕೈತಪ್ಪಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ದೊರೆಯಲಿಲ್ಲ. ಈ ಕಾರಣದಿಂದ ಕಾರ್ಯಕರ್ತರ ಅಭಿಪ್ರಾಯ ಮತ್ತು ಒತ್ತಡದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ರಾಜಕಾರಣಿಯಾದ ನನಗೆ ಜನಸೇವೆಗೆ ಈ ಸ್ಪರ್ಧೆ ಅನಿವಾರ್ಯವಾಗಿತ್ತು ಎಂದರು.ಯಾವ ವಿಚಾರಕ್ಕಾಗಿ ಯಾರು ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಗೊತ್ತಿಲ್ಲ ಆದರೆ ರಾಷ್ಟ್ರೀಯ ವಿಚಾರಧಾರೆ ಮಾತನಾಡುವ, ಹಿಂದುತ್ವಕ್ಕಾಗಿ ಮಾತನಾಡುವವರಿಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಅಂತ ಈಗ ಅನಿಸುತ್ತಿದೆ. ಅನಂತ ಕುಮಾರ್ ಹೆಗಡೆ, ಸಿ.ಟಿ. ರವಿ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದನ್ನು ನೋಡಿದಾಗ ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ. ಅದಕ್ಕೆ ಒಂದು ಕೊನೆಗಾಣಬೇಕು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪುತ್ತಿದೆ ಎಂದು ಮಾಧ್ಯಮಗಳಿಂದ ಗೊತ್ತಾಯಿತು. ಆದರೂ ನಾನು ಪಕ್ಷದ ಅಭ್ಯರ್ಥಿ ಪರವಾಗಿ ನಿಂತು ಗೆಲ್ಲಿಸಿದ್ದೇನೆ. ಆಯನೂರು ಮಂಜುನಾಥ್ ರಾಜೀನಾಮೆ ನೀಡಿದ ಬಳಿಕ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತೆ ಎಂದುಕೊಂಡಿದ್ದೆ ಆದರೆ ಆ ಚುನಾವಣೆ ನಡೆಯಲಿಲ್ಲ. ನಂತರ ಪಕ್ಷದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಕೇಳಿದ್ದೆ ಟಿಕೆಟ್ ಕೊಡುವುದಾಗಿ ಪಕ್ಷದಲ್ಲಿ ಭರವಸೆ ಇತ್ತು. ಆದರೆ ಈ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಬೇಸರ ವ್ಯಕ್ತ ಪಡಿಸಿದರು.ಹಿಜಾಬ್ ವಿಷಯವನ್ನು ನಾನು ಸೃಷ್ಟಿ ಮಾಡಿದ್ದಲ್ಲ ಬದಲಾಗಿ ಕೆಲವು ಮಕ್ಕಳನ್ನು ಕೆಲವೊಂದು ಸಂಘಟನೆಗಳು ದಾರಿ ತಪ್ಪಿಸಿದರು. ನಾನು ಎಂದೂ ಕೂಡ ಮುಸ್ಲಿಂರು ಮತ್ತು ಕ್ರೈಸ್ತರ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು.ನಾನು ಶಾಸಕನಾಗಿದ್ದಾಗ ಸಾಧಕ ಶಿಕ್ಷಕ ಪ್ರಶಸ್ತಿ ಮತ್ತು ಉತ್ತಮ ಶಾಲೆಗಳಿಗೆ ಪ್ರಶಸ್ತಿ ನೀಡಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಇದಲ್ಲದೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಪದವೀಧರರ ಬೆನ್ನಿಗೆ ಸದಾ ನಾನು ನಿಲ್ಲುತ್ತೇನೆ. ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಹೇಳಿದರು.ಬಿಜೆಪಿಯಿಂದ ಉಚ್ಛಾಟನೆ ಮಾಡಲು ಜಿಲ್ಲಾ ಬಿಜೆಪಿಯಿಂದ ರಾಜ್ಯಕ್ಕೆ ಪತ್ರ ಬರೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ವಿವರವಾದ ಉತ್ತರ ಕೊಡುವೆ. ಮಾತ್ರವಲ್ಲ,‌‌‌ ಪಕ್ಷದ ಶಿಸ್ತು ಸಮಿತಿ ವಿಚಾರಣೆಗೆ ಕರೆದರೆ ಹಾಜರಾಗಿ ವಿವರಣೆ ಕೊಡುವೆ ಇದುವರೆಗೆ ಮಾಧ್ಯಮಗಳ ಮುಂದೆ ಹೇಳಿರದ ವಿಚಾರಗಳನ್ನು ಹೇಳುತ್ತೇನೆ ಎಂದು ರಘುಪತಿ ಭಟ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ