ಕೊಪ್ಪಳ:
ಶ್ರಮಿಕ ವರ್ಗದಿಂದ ಮಾತ್ರ ಭೂಮಿಯ ಉಳಿವು ಸಾಧ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ ಹೇಳಿದರು.ತಾಲೂಕಿನ ಲೇಬಗೇರಿ ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಪಂಚಾಯಿತಿ ಹಾಗೂ ಲೇಬಗೇರಿ ಪಂಚಾಯಿತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
1975ರಿಂದ ಏ. 22ರಂದು ವಿಶ್ವ ಭೂ ದಿನ ಆಚರಿಸಲಾಗುತ್ತಿದ್ದು, ಭೂಮಿಯ ಉಳಿವಿನಿಂದ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಾಣುತ್ತಿದ್ದು, ಕಲುಷಿತವಾಗದಂತೆ ಸಂರಕ್ಷಿಸಬೇಕು. ಭೂಮಿ ರಕ್ಷಿಸಿ, ಪೋಷಿಸಿದಷ್ಟು ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ. ಸಾಲುಮರದ ತಿಮ್ಮಕ್ಕ ಸಸಿ ಬೆಳೆಸುವ ಜತೆಗೆ ಅವುಗಳನ್ನು ತನ್ನ ಮಕ್ಕಳೆಂದು ಪೋಷಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಭೂಮಿಯ ರಕ್ಷಣೆ ಇಲ್ಲದಿರುವುದರಿಂದ ವಿಶ್ವದಲ್ಲಿ ಅನೇಕ ಏರುಪೇರುಗಳು ಆಗುತ್ತಿವೆ. ಶ್ರಮಿಕ ವರ್ಗವು ಭೂಮಿ ಉಳಿವಿಗೆ ಶ್ರಮಿಸಿದಂತೆ ಉಳಿದವರು ಕೂಡಾ ಶ್ರಮಿಸಬೇಕೆಂದು ಕರೆ ನೀಡಿದರು.ಅತಿಯಾದ ನಗರೀಕರಣದಿಂದ ಭೂ ರಕ್ಷಣೆ ಕಷ್ಟಸಾಧ್ಯವಾಗಿದ್ದು ಶ್ರಮಿಕರು ಉಳಿಸಲು ಪ್ರಾಧಾನ್ಯತೆ ನೀಡುತ್ತಾರೆ. ಪ್ರಜ್ಞಾವಂತರು ಭೂಮಿಯ ರಕ್ಷಣೆ, ಪೋಷಣೆಗೆ ಕಾರ್ಯನಿರತರಾಗಬೇಕೆಂದು ಕರೆ ನೀಡಿದರು.
ತಹಸೀಲ್ದಾರ್ ವಿಠ್ಠಲ್ ಚೌಗಲಾ ಪ್ರಾಸ್ತಾವಿಕ ಮಾತನಾಡಿ, ರೈತರು ಬೆಳಗ್ಗೆಯಿಂದ ರಾತ್ರಿ ವರೆಗೂ ಭೂಮಿಯ ಒಂದಲ್ಲ-ಒಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಅವರು ಭೂಮಿಗೆ ನೀಡಿರುವ ಪ್ರಾಮುಖ್ಯತೆಯನ್ನು ನಾವು ನೀಡಬೇಕು ಎಂದರು.ತಾಪಂ ಇಒ ದುಂಡಪ್ಪ ತುರಾದಿ ಅವರು ಮಾತನಾಡಿ, ಜೀವನವನ್ನು ಉತ್ತಮವಾಗಿ ಸಾಗಿಸಬೇಕಾದರೆ ಭೂಮಿ ರಕ್ಷಣೆ, ಪೋಷಣೆ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಕೆರೆ ಅಂಗಳದಲ್ಲಿ ನ್ಯಾಯಾಧೀಶರು ಸಸಿ ನೆಟ್ಟರು. ಈ ವೇಳೆ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿ ಮಾತ್ರೆ ವಿತರಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಪೂರ್ಣೆಂದ್ರಸ್ವಾಮಿ ನಿರ್ವಹಿಸಿದರು. ಗ್ರಾಪಂ ಅಧ್ಯಕ್ಷೆ ದೇವಮ್ಮ ಕುರಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ, ಗ್ರಾಪಂ ಸದಸ್ಯರಾದ ಫಕೀರಗೌಡ ಗೌಡ್ರ, ನಾಗಪ್ಪ ದೊಡ್ಡಮನಿ, ಬಸವರಾಜ ಯತ್ನಟ್ಟಿ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಿಡಿಒ ಸಂಗಮೇಶ ತೇರಿನ, ತಾಂತ್ರಿಕ ಸಂಯೋಜಕ ಯಮನೂರ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಸರೋಜಿನಿ, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ ಸೇರಿದಂತೆ ಇತರರು ಇದ್ದರು.