ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರಸೇವಾ ನೌಕರರಿಂದ ಮನವಿ

KannadaprabhaNewsNetwork | Published : Apr 24, 2025 12:06 AM

ಸಾರಾಂಶ

ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು.

ಶಿರಹಟ್ಟಿ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಈ ಹಿಂದೆ ಮುಷ್ಕರ ಕೈಗೊಂಡಾಗ ಸರ್ಕಾರದ ಪೌರಾಡಳಿತದ ಉನ್ನತ ಮಟ್ಟದ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಇದು ಹುಸಿಯಾಗಿದ್ದು, ಸರ್ಕಾರ ತಕ್ಷಣ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.

ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ತಹಸೀಲ್ದಾರ ಅನಿಲ ಬಡಿಗೇರ ಅವರಿಗೆ ಶಾಂತಿಯುತವಾಗಿ ಮನವಿ ಸಲ್ಲಿಸಿದರು.

ಈ ವೇಳೆ ರಾಜ್ಯ ಪೌರ ನೌಕರರ ಸಂಘದ ತಾಲೂಕಾಧ್ಯಕ್ಷ ಹುಚ್ಚಪ್ಪ ಗೋಡೆಣ್ಣವರ, ಉಡಚಪ್ಪ ನೀಲಣ್ಣವರ ಮಾತನಾಡಿ, ಸರ್ಕಾರದ ಪರ ಬೇಡಿಕೆ ಈಡೇರಿಕೆಯ ಭರವಸೆ ನಿಡಿದ್ದ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳು ಮಾತಿಗೆ ತಪ್ಪಿದ್ದು, ಮತ್ತೆ ಮುಷ್ಕರದ ಹಾದಿ ಹಿಡಿಯುವಂತೆ ಮಾಡಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು. ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲಭ್ಯಗಳಾದ ಕೆಜೆಐಡಿ, ಜಿಪಿಎಫ್ ಇತರ ಸವಲತ್ತು ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್‌ಮನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು, ಕ್ಲೀನರ್, ಹೆಲ್ಪರ್, ಸ್ಯಾನಿಟರಿ ಸೂಪರವೈಜರ್ ಸೇರಿದಂತೆ ಇನ್ನು ಅನೇಕ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿ ಪರಿಗಣಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ನಮ್ಮ ನ್ಯಾಯುತ ಬೇಡಿಕೆ ಈಡೇರಿಸುವಂತೆ ಪೌರಾಡಳಿತ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಲೆಕ್ಕವಿಲ್ಲದಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಪೌರ ನೌಕರರ ವಿಷಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಹಾಗೂ ನಡೆಸುತ್ತಿರುವ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯುವ ಆರೋಗ್ಯ ಸಂಜೀವಿನಿ ಯೋಜನೆ ಸರ್ಕಾರ ಜಾರಿ ಮಾಡಿದೆ. ಮಳೆ, ಗಾಳಿ, ಬಿಸಲು, ಸಾಂಕ್ರಾಮಿಕ ರೋಗಗಳನ್ನು ಲೆಕ್ಕಿಸದೇ ಬೀದಿ ಕಸಗುಡಿಸುವವರಿಗೆ, ಕಸ ಎತ್ತ ವಿಲೇವಾರಿ ಮಾಡುವವರಿಗೆ ಯೋಜನೆ ಜಾರಿ ಮಾಡಲು ಸರ್ಕಾರ ಮಿನಮೇಷ ಎಣಿಸುತ್ತಿದೆ ಎಂದು ನೋವಿನಿಂದ ಹೇಳಿದರು.

ಈ ಎಲ್ಲ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸದೇ ಹೋದರೆ ರಾಜ್ಯ ಪೌರ ನೌಕರರ ಸಂಘದವರು ಮೇ ೨೬ರಿಂದ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲು ಕರೆ ನೀಡಿದ್ದು, ಅಷ್ಟರಲ್ಲಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರತ ಮುಂದಾಗಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ ಅನಿಲ ಬಡಿಗೇರ ಸರ್ಕಾರದ ಪರ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು.

ಮನವಿ ನೀಡುವಲ್ಲಿ ಚನ್ನವೀರಯ್ಯ ಹಿರೇಮಠ, ಆನಂದ ಘಂಟಿ, ರಮೇಶ ಕಂಟೆಮ್ಮನವರ, ಉಡಚವ್ವ ಬಡೆಣ್ಣವರ, ಫಕ್ಕಿರೇಶ ಬಂತಿ, ದುರ್ಗಪ್ಪ ಗುಡಿಮನಿ, ಮರಿಯಪ್ಪ ಪೂಜಾರ, ಉಮೇಶ ಬಡೆಣ್ಣವರ, ಮರಿಯಪ್ಪ ಗುಡಿಮನಿ, ನೀಲವ್ವ ಗುಡಿಮನಿ, ರತ್ನವ್ವ ಬಡೆಣ್ಣವರ, ಬಸವಣ್ಣೆವ್ವ ಗುಡಿಮನಿ, ಅಂದಾನಿ ಬಿಡನಾಳ, ಯಲ್ಲವ್ವ ಗೋಡೆಣ್ಣವರ, ದ್ರಾಕ್ಷಾಯಣಿ ಕಂಟೆಮ್ಮನವರ, ಹನಮಂತ ಕೊಡ್ಲಿ, ನಾಗೇಶ ಕುಲಕರ್ಣಿ, ನಿಂಗವ್ವ ಮರಚಣ್ಣವರ, ಹನಮವ್ವ ಗುಡಿಮನಿ, ಸಾವಕ್ಕ ಗುಡಿಮನಿ,ಲಕ್ಷ್ಮಣ ಮಳ್ಳಣ್ಣವರ ಇದ್ದರು.

Share this article