ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯೂಎಸಿ ಮತ್ತು ರಿಸರ್ಚ್ ಸೆಲ್ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ವಿ.ನರಸಿಂಹನ್ ಮೊದಲ ಅಧಿವೇಶನದಲ್ಲಿ ಸಂಶೋಧನಾ ವಿಧಾನ ಶಾಸ್ತ್ರದ ಪೀಠಿಕಾ ಮಾಹಿತಿ ಕುರಿತು ವಿಷಯ ಮಂಡಿಸಿ ಸಂಶೋಧನಾ ವಿಧಾನ ಶಾಸ್ತ್ರದ ಮೂಲತತ್ವಗಳು, ವಿಧಾನಗಳು ಮತ್ತು ಅವುಗಳ ಮಹತ್ವ ತಿಳಿಸಿದರು.
ಎರಡನೇ ಅಧಿವೇಶನದಲ್ಲಿ ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರು ಸಂಶೋಧನಾ ವಿನ್ಯಾಸ ಕುರಿತು ವಿಷಯ ಮಂಡಿಸಿ ಸಂಶೋಧನಾ ವಿನ್ಯಾಸದ ಪ್ರಕಾರಗಳು, ಸಮೀಕ್ಷೆಗಳು, ಪ್ರಯೋಗಾತ್ಮಕ ವಿಧಾನಗಳು ಮತ್ತು ಇತರ ವಿದಾನಗಳನ್ನು ಕುರಿತು ಮಹತ್ವದ ಮಾಹಿತಿ ನೀಡಿದ ಅವರು ಸಂಶೋಧನೆಗೆ ಸೂಕ್ತ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು.ತೃತೀಯ ಅಧಿವೇಶನದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ಪ್ರಧ್ಯಾಪಕಿ ಡಾ.ಜಿ.ಪರಮೇಶ್ವರಿ ಅವರು ಸಂಶೋಧನಾ ಬರವಣಿಗೆ ಕುರಿತು ವಿಷಯ ಮಂಡಿಸಿ ಸಂಶೋಧನಾ ವರದಿಗಳನ್ನು ರಚಿಸುವ ವಿದಾನ, ಪ್ರಬಂಧ ಬರವಣಿಗೆಯ ತಂತ್ರಗಳು ಮತ್ತು ಬರವಣಿಗೆಯ ಪ್ರಕಟಣೆಗೆ ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು.
ಐಕ್ಯೂಎಸಿ ಮತ್ತು ಕಾರ್ಯಾಗಾರದ ಸಂಯೋಜಕರಾದ ಜಿ.ಮಧು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಾಗಾರದ ಮಹತ್ವವನ್ನು ತಿಳಿಸಿದರು. ಕಾಲೇಜಿನ ವಾಣಿಜ್ಯ ಸಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಕೆ.ಮಹದೇವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರೀತಿ ನಿರೂಪಿಸಿ ವಂದಿಸಿದರು.