ಸಂಡೂರು: ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ ಅವರು ಮಾತನಾಡಿ, ಉತ್ತಮ ಪರಿಸರವಿದ್ದರೆ ಮಾತ್ರ ನಾವು ಆರೋಗ್ಯದಿಂದ ಇರಲು ಸಾಧ್ಯ. ಸಂಡೂರಿನ ಅರಣ್ಯದಲ್ಲಿ ಹಲವು ರೀತಿಯ ಔಷಧೀಯ ಸಸ್ಯಗಳನ್ನು ಕಾಣುತ್ತೇವೆ. ವಿದ್ಯಾರ್ಥಿಗಳು ಆರೋಗ್ಯಕರ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕಲ್ಲದೆ, ಶಾಲೆಯಲ್ಲಿ ಹಾಗೂ ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಶ್ರಮಿಸಬೇಕು ಎಂದರು. ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಸಿಸ್ಟರ್ ಸಿಸಿಲಿಯಾ ಫೆಲಿಕ್ಸ್ ಅವರು ಪರಿಸರ ಸಂರಕ್ಷಣೆ ಹಾಗೂ ನಿರ್ಮಾಣದ ಮಹತ್ವ ಕುರಿತು ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು ಔಷಧೀಯ ಸಸ್ಯಗಳ ಮಹತ್ವ ಕುರಿತು ಕಿರು ರೂಪಕವನ್ನು ಪ್ರದರ್ಶಿಸಿದರೆ, ಓರ್ವ ವಿದ್ಯಾರ್ಥಿನಿ ಪರಿಸರದ ಮಹತ್ವ ಸಾರುವ ಹಾಡನ್ನು ಹಾಡಿದಳು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೂಸಿ, ಸಿಸ್ಟರ್ ಸುಶೀಲ, ಸಿಸ್ಟರ್ ರಿಡಾಲಿನ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಡೂರಿನ ಕೃಪಾನಿಲಯ ಶಾಲೆಯಲ್ಲಿ ಶುಕ್ರವಾರ ವಿಶ್ವಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.