ಪುತ್ತೂರು: ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರಿದ್ದು, ತಪ್ಪು ಕಲ್ಪನೆಯ ಕಾರಣದಿಂದಾಗಿ ಅಡಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹೇಳಿಕೆ ನೀಡಿರಬಹುದು. ವಿಶ್ವ ಆರೋಗ್ಯ ಸಂಸ್ಥೆಗೆ ಅಡಕೆಯ ಸಾಂಸ್ಕೃತಿಕ ಹಿನ್ನಲೆ ಮತ್ತು ಪರಂಪರೆ ಮನದಟ್ಟು ಮಾಡಬೇಕಾಗಿದೆ. ಈ ದೃಷ್ಟಿಯಿಂದ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಅವರು ಸೋಮವಾರ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.ಅಡಕೆ ವಿಚಾರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ ಚೌಹಾನ್ ಉನ್ನತ ಮಟ್ಟದ ಸಭೆ ಈಗಾಗಲೇ ನಡೆಸಿದ್ದಾರೆ. ಈ ಸಭೆಯಲ್ಲಿ ಅಡಕೆ ಬೆಳೆಯುವ ಭಾಗದ ಸಂಸದರು, ಕೃಷಿ, ಆರೋಗ್ಯ ಅಧಿಕಾರಿಗಳು, ಉನ್ನತ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದರು. ಅಡಕೆ ಬಗ್ಗೆ ಇರುವಂತಹ ತಪ್ಪು ಕಲ್ಪನೆಯ ಕುರಿತು ಕೇಂದ್ರದ ಉನ್ನತ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ಈ ವಿಚಾರ ತರಲಾಗಿದೆ. ಈ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ಸರಿಯಾದ ರೀತಿಯಲ್ಲಿ ವಾದ ಮಂಡಿಸಬೇಕು ಎಂಬುದು ಒಂದು ಭಾಗವಾಗಿದೆ. ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ಸಂಸ್ಕೃತಿ ಮತುತ ಪರಂಪರೆಯ ಬಗ್ಗೆ ಗೊತ್ತಿಲ್ಲ. ಅಡಕೆಯ ಸಾಂಸ್ಕೃತಿಕ ಮತ್ತು ಪರಂಪರೆ ವಿಶ್ವ ಆರೋಗ್ಯ ಸಂಸ್ಥೆ ಮುಂದೆ ಪ್ರತಿನಿಧಿಸಬೇಕಾಗಿದೆ. ಅದಕ್ಕೆ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದರು.
ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದ ಸಮಸ್ಯೆಯನ್ನೂ ಈ ಸಭೆಯಲ್ಲಿ ಉಲ್ಲೇಖಿಸಲಾಗಿದೆ. ರೋಗ ಬಾಧಿತ ಪ್ರದೇಶದಲ್ಲಿ ಮತ್ತೆ ಅಡಕೆ ಬೆಳೆಯುವುದಕ್ಕೆ ಸಮಸ್ಯೆಯಿದ್ದು, ಒನ್ ಟೈಮ್ ಪ್ಯಾಕೇಜ್ ಘೋಷಿಸಬೇಕು ಮತ್ತು ಪರ್ಯಾಯ ಬೆಳೆಯ ಬಗ್ಗೆ ಪ್ರಯತ್ನ ನಡೆಸಬೇಕೆಂಬ ಬೇಡಿಕೆಗಳಿದೆ. ಸಚಿವರು ಹಳದಿ ರೋಗದ ಪ್ರದೇಶವನ್ನು ಖುದ್ದು ವೀಕ್ಷಿಸುವ ಭರವಸೆ ನೀಡಿದ್ದಾರೆ. ಇದರ ಪೂರ್ವಭಾವಿ ಸಭೆಗಳು ಈಗಗಾಲೇ ತೋಟಗಾರಿಕಾ ಇಲಾಖೆಯಿಂದ ನಡೆದಿದೆ ಕಾಫಿ ಬೋರ್ಡ್ ಅಧ್ಯಕ್ಷರನ್ನು ಕರೆಸಿ ಜಿಲ್ಲೆಯ ವಿವಿಧ ಕಡೆಯಲ್ಲಿ ಕಾಫಿ ಬೆಳೆಯುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆಯನ್ನು ಮಾಡಿಸಲು ಸೂಚಿಸಲಾಗಿದೆ ಎಂದರು.