ಕನ್ನಡಪ್ರಭ ವಾರ್ತೆ ಸುತ್ತೂರು
ಜ್ಯೋತಿ ಭತ್ತದ ತಳಿಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಮುಕ್ತಿ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಳಿಯು ಬೆಂಕಿರೋಗ ತಡೆಯುವ ಶಕ್ತಿಯನ್ನು ಹೊಂದಿದೆ. ಸಹ್ಯಾದ್ರಿ ಕೆಂಪು ಮುಕ್ತಿತಳಿಯು ಜ್ಯೋತಿ ಭತ್ತದ ತಳಿಗಿಂತ ಕಾಳು ದಪ್ಪವಾಗಿದ್ದು ಹೊಳಪು ಇದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.
ನಂಜನಗೂಡು ಭಾಗದಲ್ಲಿ 500 ಎಕೆರೆಗೂ ಹೆಚ್ಚು ಸಹ್ಯಾದ್ರಿ ಕೆಂಪು ಮುಕ್ತಿಯನ್ನು ಬಿತ್ತನೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಅಲ್ಲದೇ, ಸಣ್ಣ ಕೆಂಪು ಅಕ್ಕಿಯ ಸಹ್ಯಾದ್ರಿ ಸಿಂಧೂರ ತಳಿಯನ್ನು ಸಹ ಅಭಿವೃದ್ಧಿಪಡಿಸಲಾಗಿದ್ದು, ಈ ತಳಿಯು ಕಬ್ಬಿಣ, ಪ್ರೋಟೀನ್, ಸತು ಹಾಗೂ ಔಷಧಿಯ ಗುಣಗಳನ್ನು ಒಳಗೊಂಡಿದೆ. ಮುಂದಿನ ಹಂಗಾಮಿನಲ್ಲಿ ಸಹ್ಯಾದ್ರಿ ಸಿಂಧೂರ ತಳಿಯನ್ನು ಬೀಜೋತ್ಪಾದನೆಗಾಗಿ ರೈತರಿಗೆ ನೀಡಲಾಗುವುದು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಐಸಿಎಆರ್- ಜೆಎಸ್‌ಎಸ್ ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಪ್ರಸ್ತುತ ವ್ಯವಸಾಯದ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಾಗಿದೆ. ರೈತರು ಕಡ್ಡಾಯವಾಗಿ ಎರಡು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆಯನ್ನು ಮಾಡಿಸಿ, ತಜ್ಞರ ಸಲಹೆಯ ಮೇರೆಗೆ ಗೊಬ್ಬರಗಳನ್ನು ಉಪಯೋಗಿಸಲು ಕರೆ ನೀಡಿದರು.
ಸಾಮಾನ್ಯವಾಗಿ ಒಂದು ತಳಿಯನ್ನು ಅಭಿವೃದ್ಧಿಪಡಿಸಬೇಕಾದರೆ 10 ರಿಂದ 15 ವರ್ಷಗಳ ಪರಿಶ್ರಮ ಹಾಕಬೇಕಾಗುತ್ತದೆ. ಸುಮಾರು 25 ವರ್ಷಗಳಿಂದ ಉಪಯೋಗಿಸುತ್ತಿದ್ದ ಜ್ಯೋತಿ ಭತ್ತದ ತಳಿಯನ್ನು ಬದಲಾಯಿಸುವುದು ತುಂಬಾ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಸಂಶೋಧಕ ನಿರ್ದೇಶಕರಾದ ಡಾ. ದುಶ್ಯಂತ್ ಅವರು ಸಹ್ಯಾದ್ರಿ ಕೆಂಪು ಮುಕ್ತಿ ತಳಿಯನ್ನು ಅಭಿವೃದ್ಧಿಪಡಿಸಿ ರೈತ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ ಎಂದರು.ಸಹ್ಯಾದ್ರಿ ಕೆಂಪು ಮುಕ್ತಿ ತಳಿಯಲ್ಲದೇ, ತುಂಗಾ, ಜಲಮುಕ್ತಿ ಹೀಗೆ ಹಲವಾರು ಭತ್ತದ ತಳಿಗಳನ್ನು ಆಯಾ ಪ್ರದೇಶಗಳ ಅನುಗುಣವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು. ಸಂಶೋಧಕ ನಿರ್ದೇಶಕ ಡಾ. ದುಶ್ಯಂತ್ ಅವರ ಈ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ ಎಂದರು.
ಕೆವಿಕೆಯ ವಿಷಯತಜ್ಞರಾದ ಶಾಮರಾಜು ಕ್ಷೇತ್ರೋತ್ಸವದ ಕುರಿತು ಮಾತನಾಡಿದರು. ಎಚ್.ವಿ.ದಿವ್ಯಾ ಮಣ್ಣು ಆರೋಗ್ಯದ ಕುರಿತು ಮಾಹಿತಿ ನೀಡಿದರು. ನಗರ್ಲೆ ಗ್ರಾಮದ ಗುರುಸ್ವಾಮಿ, ಪ್ರಶಾಂತ್ ಹಾಗೂ ರೈತರು ಭಾಗವಹಿಸಿದ್ದರು.