ಹೊಸಪೇಟೆ: ಪ್ರವಾಸೋದ್ಯಮದ ಕೇಂದ್ರ ಸ್ಥಾನವಾದ ಹಂಪಿಯಲ್ಲಿ ಶುಕ್ರವಾರ ಸಂಜೆ 4ಕ್ಕೆ ಆರಂಭವಾಗಬೇಕಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ರಾತ್ರಿ ಏಳು ಗಂಟೆಗೆ ಆರಂಭಗೊಂಡಿತು. ಇದರಿಂದಾಗಿ ಹಂಪಿಯಲ್ಲಿ ಕಾಟಾಚಾರದ ಕಾರ್ಯಕ್ರಮ ಮಾಡಬೇಡಿ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಸಂಜೆ 4ರಿಂದ ಪ್ರವಾಸಿಗರು, ಪ್ರವಾಸಿ ಮಿತ್ರರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಕಾದು ಸುಸ್ತಾದರು. ಕೆಲವರು ಮನೆಗೆ ವಾಪಸಾದರೆ, ಕೆಲವೇ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಕಾರ್ಯಕ್ರಮ ಆಚರಣೆ ಮಾಡಲಾಯಿತು. ನಾಮಕಾವಾಸ್ತೆ ಆಚರಣೆಯಾದ ಪ್ರವಾಸೋದ್ಯಮ ದಿನಾಚರಣೆ ಆಕ್ರೋಶಕ್ಕೆ ಕಾರಣವಾಯಿತು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ರಥ ಬೀದಿಯಲ್ಲಿ ಶುಕ್ರವಾರ ಸಂಜೆ ಆರಂಭವಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉಪವಿಭಾಗಾಧಿಕಾರಿ ವಿವೇಕಾನಂದ ಚಾಲನೆ ನೀಡಿ, ಪ್ರವಾಸೋದ್ಯಮ ಮತ್ತು ಶಾಂತಿ ಈ ಕಾರ್ಯಕ್ರಮದ ಧ್ಯೇಯ ವಾಕ್ಯವಾಗಿದೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದು, ಹಂಪಿಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.ಹೊಸಪೇಟೆ ಪ್ರಾಧ್ಯಾಪಕ ಡಾ. ಶಿವನಗೌಡ ವಿಶೇಷ ಉಪನ್ಯಾಸ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್. ತಳಕೇರಿ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಧಾರ್ಮಿಕ ದತ್ತಿ ಇಲಾಖೆ ಇಒ ಹನುಮಂತಪ್ಪ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ಸುನೀಲ್, ಗ್ರಾಪಂ ಅಧ್ಯಕ್ಷೆ ರಜನಿಗೌಡ, ಗ್ರಾಪಂ ಸದಸ್ಯರಾದ ಹನುಮಂತಪ್ಪ, ರೂಪಾ, ಕಾರ್ಯದರ್ಶಿ ಕೊಟ್ರೇಶ್ ಮತ್ತಿತರರಿದ್ದರು.