ಕರ್ನಾಟಕ ಪಬ್ಲಿಕ್ ಸ್ಕೂಲ್‌ ಮಕ್ಕಳ ಬಿಸಿಯೂಟದಲ್ಲಿ ಹುಳುಗಳು...!

KannadaprabhaNewsNetwork |  
Published : Dec 20, 2025, 01:30 AM IST
೧೯ಕೆಎಂಎನ್‌ಡಿ- ೫ಮಂಡ್ಯದ ಅರ್ಕೇಶ್ವರ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳಿಗೆ ನೀಡಿರುವ ಬಿಸಿಯೂಟದಲ್ಲಿ ಹುಳುಗಳಿರುವುದು. | Kannada Prabha

ಸಾರಾಂಶ

ಗುತ್ತಲಿನಲ್ಲಿರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ತಯಾರಿಸಲಾದ ಬಿಸಿಯೂಟದಲ್ಲಿ ಹುಳುಗಳಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳು ಹೆದರಿ ಊಟವನ್ನು ತಿನ್ನದೆ ಬಿಸಾಡಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಹುಳುಗಳು ಕಾಣಸಿಗುವುದು ಹೊಸದೇನಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಗುತ್ತಲಿನಲ್ಲಿರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ತಯಾರಿಸಲಾದ ಬಿಸಿಯೂಟದಲ್ಲಿ ಹುಳುಗಳಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳು ಹೆದರಿ ಊಟವನ್ನು ತಿನ್ನದೆ ಬಿಸಾಡಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಹುಳುಗಳು ಕಾಣಸಿಗುವುದು ಹೊಸದೇನಲ್ಲ. ವರ್ಷದಿಂದ ಹಲವಾರು ಬಾರಿ ಇಂತಹ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದರೂ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ.

ಈ ಶಾಲೆಯಲ್ಲಿ ನರ್ಸರಿಯಿಂದ ಹೈಸ್ಕೂಲ್‌ವರೆಗೆ ಸುಮಾರು ೬೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿದ್ದಾರೆ. ಶಾಲೆಯ ಬಿಸಿಯೂಟ ನಿರ್ವಹಣೆಯಲ್ಲಿ ಲೋಪದೋಷಗಳು ಕಂಡುಬರುತ್ತಲೇ ಇವೆ. ಅದರಂತೆ ಶುಕ್ರವಾರ ಮಧ್ಯಾಹ್ನ ಮಕ್ಕಳಿಗೆ ನೀಡಿದ ಬಿಸಿಯೂಟದಲ್ಲಿ ಹುಳುಗಳೇ ತುಂಬಿರುವುದು ಕಂಡುಬಂದಿತು.

ಊಟದಲ್ಲಿದ್ದ ಹುಳುಗಳನ್ನು ಕಂಡ ಮಕ್ಕಳು ಊಟವನ್ನು ತಿನ್ನದೆ ಬಿಸಾಡಿದ್ದಾರೆ. ಬಿಸಿಯೂಟ ತಯಾರಿಕೆಗೆ ಕಳಪೆ ಅಕ್ಕಿ ಮೊದಲಿನಿಂದಲೂ ಪೂರೈಕೆಯಾಗುತ್ತಿದೆ. ಶಿಕ್ಷಕರು ಮತ್ತು ಅಡುಗೆ ತಯಾರಕರು ಕೂಡ ಹುಳುಗಳಿರುವ ಅಕ್ಕಿಯನ್ನು ಹಿಂದೆ ಮುಂದೆ ನೋಡದೆ ಮಕ್ಕಳ ಬಿಸಿಯೂಟಕ್ಕೆ ಬಳಸುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದೆಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ.

ಬಿಸಿಯೂಟದಲ್ಲಿ ಉಂಟಾಗುತ್ತಿರುವ ಲೋಪದೋಷಗಳನ್ನು ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಕಾಂತರಾಜ್ ಅರಸ್ ಅವರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಡುಗೆ ತಯಾರಕರನ್ನು ಪ್ರಶ್ನಿಸಿದರೆ ದುಂಡಾವರ್ತನೆ ಪ್ರದರ್ಶಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಶಾಲಾ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಪೋಷಕರ ಸಭೆಯಲ್ಲಿ ಹಲವರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಡವರ ಮಕ್ಕಳು ಎಂಬ ಕಾರಣಕ್ಕೆ ಇಂತಹ ಆಹಾರ ಕೊಡುತ್ತಿದ್ದೀರಾ. ನಿಮ್ಮ ಮಕ್ಕಳಿಗೂ ಹುಳುಗಳು ಬಿದ್ದಿರುವ ಆಹಾರವನ್ನೇ ನೀಡುತ್ತೀರಾ. ನಿಮಗೆ ಸ್ವಲ್ಪವೂ ಮಾನವೀಯತೆ, ಕರುಣೆಯೇ ಇಲ್ಲವಾ. ಇಂತಹ ಆಹಾರ ತಿಂದರೆ ಮಕ್ಕಳ ಗತಿ ಏನು ಎಂದು ಯೋಚಿಸುವುದೇ ಇಲ್ಲವೇ. ಇಂತಹ ಆಹಾರ ಪದಾರ್ಥಗಳನ್ನು ಕಣ್ಣಿದ್ದೂ ಕುರುಡರಂತೆ ಊಟಕ್ಕೆ ಬಳಸುತ್ತಿದ್ದೀರಾ ಎಂಬ ಕಠಿಣ ಶಬ್ಧಗಳಲ್ಲಿ ಟೀಕಿಸಿದರೂ ಯಾರೂ ಕೂಡ ಅದನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಮಕ್ಕಳಿಗೆ ಉತ್ತಮ ಆಹಾರ ನೀಡುವ ಯೋಗ್ಯತೆ ಇಲ್ಲದಿದ್ದರೆ ಅದನ್ನು ನಿಲ್ಲಿಸಿಬಿಡಿ. ಒಪ್ಪತ್ತು ಉಪವಾಸವಿದ್ದರೂ ಪರವಾಗಿಲ್ಲ. ಇಂತಹ ಕೊಳಕು ಆಹಾರವನ್ನು ಮಾತ್ರ ನೀಡಬೇಡಿ ಎಂದು ಕಿಡಿಕಾರಿದ್ದಾರೆ.

ಕಳಪೆ ಬಿಸಿಯೂಟ ನೀಡುತ್ತಿರುವ ಬಗ್ಗೆ ಬಿಸಿಯೂಟ ಜವಾಬ್ದಾರಿ ಹೊತ್ತ ಶಿಕ್ಷಕರನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಕಾಂತರಾಜ್ ಅರಸ್ ಪ್ರಶ್ನಿಸಿದರೆ, ನೀವು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು. ದೂರುಗಳಿದ್ದರೆ ಅದನ್ನು ಮೇಲಾಧಿಕಾರಿಗಳಿಗೆ ತಿಳಿಸುವಂತೆ ಉದ್ಧಟತನದ ಉತ್ತರ ನೀಡುತ್ತಾರೆ ಎಂದು ಆಪಾದಿಸಿದ್ದಾರೆ.

ಮಕ್ಕಳಿಗೆ ಹುಳುಗಳು ಬಿದ್ದಿರುವ ಆಹಾರವನ್ನು ನೀಡಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಶಾಲೆಯ ಉಪಾಧ್ಯಾಯರು, ಶಿಕ್ಷಣ ಇಲಾಖೆ ಅಧಿಕಾರಿ ವರ್ಗದವರು ನೇರ ಕಾರಣರಾಗುತ್ತಾರೆ. ಅಸಡ್ಡೆಯಿಂದ ಬಿಸಿಯೂಟ ನಿರ್ವಹಣೆ ಮಾಡುತ್ತಿರುವ ಸಂಬಂಧಪಟ್ಟ ಉಪಾಧ್ಯಾಯರು ಮತ್ತು ಆಹಾರ ತಯಾರಕರ ಮೇಲೆ ಸೂಕ್ರ ಕ್ರಮ ಜರುಗಿಸಿ ಬಿಸಿಯೂಟ ಯಶಸ್ವಿಯಾಗಿ ನಡೆಯಲು ಶಾಲೆಯ ಉಪಪ್ರಾಂಶುಪಾಲರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!