ವಿಘ್ನೇಶ್ ಎಂ. ಭೂತನಕಾಡು
ಮಳೆಗಾಲದ ಸಂದರ್ಭದಲ್ಲಿ ಮಡಿಕೇರಿಯ ಬೆಟ್ಟದ ನಿವಾಸಿಗಳಿಗೆ ಆತಂಕ ಉಂಟಾಗುತ್ತದೆ. ಮಡಿಕೇರಿ ನಗರ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರಿ ಮಳೆಯಾದರೆ ಬರೆ ಕುಸಿಯುವ ಭೀತಿ ಕಾಡುತ್ತದೆ. ಇದರಿಂದ ನಗರದ ನಿವಾಸಿಗಳು ಜೀವ ಭಯದಲ್ಲೇ ದಿನ ದೂಡುವ ಪರಿಸ್ಥಿತಿ ಎದುರಾಗಿದೆ.
2018ರಲ್ಲಿ ಸುರಿದ ಭಾರಿ ಮಳೆಯ ಸಂದರ್ಭ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲೂ ಕೂಡ ಅಪಾರ ಹಾನಿ ಸಂಭವಿಸಿತ್ತು. ಬೆಟ್ಟದ ಮೇಲಿನ ಅಪಾಯಕಾರಿ ಮನೆಗಳು ನೆಲಸಮವಾಗಿತ್ತು. ಇದಾದ ಬಳಿಕ ಪ್ರತಿ ವರ್ಷ ಮಳೆ ಬಂದರೆ ಮಡಿಕೇರಿ ನಗರದ ಜನ ಚಿಂತೆಗೆ ಒಳಗಾಗುತ್ತಾರೆ.ಜೂನ್ ತಿಂಗಳ ಆರಂಭದಲ್ಲಿ ಮಳೆ ಕಡಿಮೆಯಿತ್ತಾದರೂ ತಿಂಗಳ ಅಂತ್ಯದಲ್ಲಿ ಉತ್ತಮ ಮಳೆಯಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನಗರದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಮಳೆಗಾಲದಲ್ಲಿ ಮಾತ್ರ ನಿರಾಶ್ರಿತರನ್ನು ಸ್ಥಳಾಂತರ ಮಾಡಲಾಗುತ್ತದೆ. ಆದರೆ ಅವರು ಮತ್ತೆ ಅದೇ ಅಪಾಯದ ಸ್ಥಳದಲ್ಲೇ ವಾಸ ಮಾಡುವ ಪರಿಸ್ಥಿತಿ ಉಂಟಾಗಿದೆ.
ನಗರಸಭೆಯಿಂದ ನೋಟೀಸ್ :
ನಗರದಲ್ಲಿ ಅಪಾಯಕಾರಿ ಮನೆಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ನಗರಸಭೆಗೆ ಸಭೆಯೊಂದರಲ್ಲಿ ಸೂಚಿಸಿದ್ದಾರೆ. ಅದರಂತೆ ಆದಷ್ಟು ಬೇಗ ಪರಿಹಾರ ಅಗತ್ಯವಾಗಿದೆ. ಇಲ್ಲದಿದ್ದರೆ ಪ್ರತಿ ಮಳೆಗಾಲದ ಸಂದರ್ಭದಲ್ಲೂ ಇದೇ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ.
ಮಡಿಕೇರಿ ನಗರದ ಬಹುತೇಕ ಮನೆಗಳು ಬೆಟ್ಟದಲ್ಲಿರುವುದರಿಂದ ಮಳೆಗಾಲದಲ್ಲಿ ಯಾವಾಗ ಕುಸಿಯುತ್ತದೆ ಎಂಬ ಆತಂಕವಿರುತ್ತದೆ. ಇದರಿಂದಾಗಿ ಅಧಿಕ ಮಳೆಯಾದ ಸಂದರ್ಭ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಮಳೆ ಕಡಿಮೆಯಾದ ಬಳಿಕ ಮತ್ತೆ ಅದೇ ಮನೆಗೆ ಹೋಗಿ ಜೀವನ ನಡೆಸಬೇಕಾದ ಪರಿಸ್ಥಿತಿ ಮಡಿಕೇರಿಯ ಕೆಲವು ನಿವಾಸಿಗಳದ್ದಾಗಿದೆ.
ಮಳೆಗಾಲವಾಗಿರುವುದರಿಂದ ಯಾವಾಗ ಬರೆ ಕುಸಿಯುತ್ತದೆ ಎಂಬ ಆತಂಕ ಉಂಟಾಗಿದೆ. ಮಳೆಗಾಲದ ಸಂದರ್ಭ ನಗರದ ಅಪಾಯಕಾರಿ ಸ್ಥಳಗಳಲ್ಲಿರುವ ನಿವಾಸಿಗಳಿಗೆ ನೋಟೀಸ್ ನೀಡಲಾಗುತ್ತಿದೆ. ಅಪಾಯದ ಮನೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು.
-ಕಲಾವತಿ, ಅಧ್ಯಕ್ಷರು ಮಡಿಕೇರಿ ನಗರಸಭೆ