ಭೀಮಣ್ಣ ಗಜಾಪುರ ಕೂಡ್ಲಿಗಿ
ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬಾರದಿರಲಿ ಎಂದು ಬೇಡಿಕೊಳ್ಳುವ ಸಲುವಾಗಿ ಇಲ್ಲಿ ಗಣೇಶನ ಮೂರ್ತಿ ಬದಲು ಇಲಿರಾಯನ ಮೂರ್ತಿ ಕೂರಿಸುತ್ತಾರೆ. ನೇಕಾರರು ಬಟ್ಟೆ, ಸೀರೆ ಹೆಣೆಯಲು ದುಬಾರಿಯ ರೇಷ್ಮೆ ಇತರ ನೂಲು ತಂದು ತಮ್ಮ ಮನೆಗಳಲ್ಲಿ ಇಟ್ಟಿರುತ್ತಾರೆ. ಮನೆಯಲ್ಲಿನ ಇಲಿಗಳು ನೂಲು ಕಡಿದು ಬಿಟ್ಟರೆ ಸಹಸ್ರಾರು ರುಪಾಯಿ ನಷ್ಟವನ್ನು ನೇಕಾರರೇ ಹೊರಬೇಕಾಗುತ್ತಿದೆ. ನೂರು ಇನ್ನೂರು ಕೂಲಿಗಾಗಿ ಸಾವಿರಾರು ಮೌಲ್ಯದ ರೇಷ್ಮೆ ನೂಲನ್ನು ತಂದು ಬಟ್ಟೆಯ ನೇಯುವ ಕುಟುಂಬಗಳಿಗೆ ನೂಲನ್ನು ಇಲಿಗಳು ಕಡಿದುಬಿಟ್ಟರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹೀಗಾಗಿ ಇವರು ಇಲಿರಾಯನಿಗೆ ದೇವರ ಸ್ಥಾನಮಾನ ನೀಡುತ್ತಾರೆ. ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂದು ಪ್ರತಿ ವರ್ಷ ಗಣೇಶನ ಹಬ್ಬದ ಸಂದರ್ಭದಲ್ಲಿ 3 ದಿನಗಳ ಕಾಲ ಇಲಿರಾಯನ ಮೂರ್ತಿ ಕೂರಿಸಿ, ಪೂಜಿಸಿ, ಸಿಹಿ ಮಾಡಿ ನೇಕಾರ ಕುಟುಂಬದರವರೆಲ್ಲರೂ ಸಂಭ್ರಮಿಸುತ್ತಾರೆ.
ನೂಲು ಮುಟ್ಟುವ ಹಾಗಿಲ್ಲ: ಗಣೇಶನಂತೆ ಮಣ್ಣಿನಿಂದ ಮಾಡಿದ ಇಲಿರಾಯನ ಮೂರ್ತಿಯನ್ನು 3 ದಿನಗಳ ಕಾಲ ಮನೆಯಲ್ಲಿ ಕೂರಿಸಿ ಪ್ರತಿದಿನ ಕುಟುಂಬದವರೆಲ್ಲರೂ ಭಕ್ತಿಯಿಂದ ಪೂಜೆ ಮಾಡಿ, 3 ದಿನಗಳ ನಂತರ ಇಲಿರಾಯನನ್ನು ನೀರಿಗೆ ಬಿಡುತ್ತಾರೆ. ನೀರಲ್ಲಿ ಬಿಡುವಾಗ ಕಡುಬನ್ನು ಜತೆಗೆ ಬಿಟ್ಟು ಬರುತ್ತಾರೆ. ಇಲಿ ಮೂರ್ತಿ ಜತೆಗೆ ತಮಗೆ ಅನ್ನ ನೀಡುವ ಕೈಮಗ್ಗಕ್ಕೂ ಗಣೇಶನ ಹಬ್ಬದ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಾರೆ. ಆದರೆ ಯಾರೂ 3 ದಿನಗಳ ಕಾಲ ನೇಯ್ಗೆ ಮಾಡುವುದಿಲ್ಲ. ಪೂರ್ವಜರ ಕಾಲದಿಂದಲೂ ಇಂತಹ ಆಚರಣೆ ಮಾಡುತ್ತಾ ಬಂದಿದ್ದಾರೆ. ನೂಲು ನೇಯ್ಗೆಯಿಂದ ಜೀವನ ಸಾಗಿಸುವ ನೇಕಾರ ಕುಟುಂಬಗಳಿಗೆ ನೂಲಿನ ದರ ಹೆಚ್ಚಳ ಆಗುತ್ತಿದ್ದು, ನೇಯುವ ಕೂಲಿ ದರ ಕಡಿಮೆಯಾಗುತ್ತಿದ್ದರಿಂದ ಬಹುತೇಕ ನೇಕಾರರು ಈಗ ತಮ್ಮ ಕುಲಕಸುಬು ಬಿಟ್ಟು ಬೇರೆ ಉದ್ಯೋಗ ಆರಂಭಿಸಿದ್ದಾರೆ.ನಾವ್ಯಾರೂ ಗಣೇಶನನ್ನು ಕೂರಿಸೋದಿಲ್ಲ ಸಾರ್, ಇಲಿಚಪ್ಪನೇ ನಮ್ಗೆ ಶ್ರೇಷ್ಠ ದೇವ್ರು, ಗಣೇಶನ ಮೂರ್ತಿಯಂತೆ ಇಲಿಚಪ್ಪನ ಮೂರ್ತಿ ತಂದು 3 ದಿನ ಮನೆಯಲ್ಲಿ ಕೂಡ್ಸಿ ಕಡುಬು ಮಾಡಿ ಕಡುಬಿನ ಜತೆಗೇ ನೀರಲ್ಲಿ ಬಿಟ್ಟು ಬರ್ತೀವಿ. ಮೂರು ದಿನ ಯಾವ ನೇಕಾರರು ನೂಲು ಮುಟ್ಟೋದಿಲ್ಲ, ಕೈಮಗ್ಗದಲ್ಲಿ ಬಟ್ಟೆ ನೇಯೋದಿಲ್ಲ, ಒಂದು ವೇಳೆ ಬಟ್ಟೆ ನೇಯ್ದರೆ ಕೇಡು ಕಟ್ಟಿಟ್ಟ ಬುತ್ತಿ ಎಂದು ನೇಕಾರ ಸಮಾಜದ ಹಿರಿಯ ವೀರಣ್ಣ ತಿಳಿಸಿದ್ದಾರೆ.