ಚಿತ್ರದುರ್ಗ: ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಸಲ್ಲಿಸುವ ಕುರಿತು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಿಯೋಗ ಶನಿವಾರ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿಲ್ಲಪ್ಪ ಅವರನ್ನು ಹೊಸದುರ್ಗದಲ್ಲಿ ಭೇಟಿಯಾಗಿ ಚರ್ಚಿಸಿತು. ರಿಟ್ ಸಲ್ಲಿಸುವ ಸಂಬಂಧ ಕಾನೂನು ಸಲಹೆ ಕೋರಿದರು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಾಜ್ಯದ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಪ್ರತಿಭಟನೆ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರು. ತುಂಗಭದ್ರಾ ಹಿನ್ನೀರಿನಿಂದ ಮೀಸಲು ವಿಧಾನಸಭೆ ಕ್ಷೇತ್ರಗಳಾದ ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು ಹಾಗೂ ಪಾವಗಡ ಕ್ಷೇತ್ರಗಳಿಗೆ 2500 ಕೋಟಿ ರು. ವೆಚ್ಚದ ಕುಡಿವ ನೀರು ಯೋಜನೆಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳಿಗೆ ಕಳೆದ ಎರಡು ವರ್ಷಗಳಲ್ಲಿ 32 ಸಾವಿರ ಕೋಟಿ ರು. ಅನುದಾನ ವ್ಯಯ ಮಾಡಲಾಗಿದೆ. ಹಾಗಾಗಿ ಪರಿಶಿಷ್ಟರ ಕಲ್ಯಾಣದ ಅನುದಾನವ ಭದ್ರಾ ಮೇಲ್ದಂಡೆಗೂ ವಿನಿಯೋಗಿಸಿ ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಚಿತ್ರದುರ್ಗ ಲೋಕಸಭೆ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಹೊಳಲ್ಕೆರೆ, ಜಗಳೂರು, ಮೊಳಕಾಲ್ಮುರು, ಪಾವಗಡ, ಚಳ್ಳಕೆರೆ ವಿಧಾನಸಭೆ ಮೀಸಲು ಕ್ಷೇತ್ರಗಳಾಗಿವೆ. ಹಾಗಾಗಿ ತುಂಗಭದ್ರಾ ಹಿನ್ನೀರಿಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿದ ರೀತಿ ಭದ್ರಾ ಮೇಲ್ದಂಡೆಗೆ ಕೂಡಿ ಎಂಬುದು ನಮ್ಮ ಬೇಡಿಕೆ. ಸರ್ಕಾರ ಅನುದಾನ ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತುಂಗಭದ್ರಾ ಹಿನ್ನೀರು ಯೋಜನೆಗೆ ಹಾಗೂ ಗ್ಯಾರಂಟಿಗೆ ಅನುದಾನ ಬಳಕೆ ಮಾಡಿರುವ ವಿಷಯ ಪ್ರಧಾನವಾಗಿರಿಸಿಕೊಂಡು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಪಿಸಬೇಕೆಂದಿದ್ದೇವೆ ಎಂದು ಲಿಂಗಾ ರೆಡ್ಡಿ ಹೇಳಿದರು. ನಿಯೋಗದ ಮನವಿ ಆಲಿಸಿದ ನ್ಯಾಯಮೂರ್ತಿ ಬಿಲ್ಲಪ್ಪ, ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಇದುವರೆಗೂ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದವು. ಅನುದಾನ ಬಿಡುಗಡೆಗಾಗಿ ಸಾರ್ವಜನಿಕ ಹಿತಾಸಕ್ತಿ ರಿಟ್ ಹಾಕುವುದು ಈ ಭಾಗದಲ್ಲಿ ಹೊಸದು. ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ರಿಟ್ ಸಲ್ಲಿಸಲು ಅರ್ಹತೆ ಹೊಂದಿದೆ. ಸೂಕ್ತ ದಾಖಲಾತಿಗಳ ಸಂಗ್ರಹಿಸಿ ನ್ಯಾಯಾಲಯ ಮಂದೆ ತಂದು ಒಪ್ಪಿಸಬೇಕಿದೆ. ನಿಜಕ್ಕೂ ಸಾರ್ವಜನಿಕ ಹಿತಾಸಕ್ತಿಗೆ ಪ್ರಧಾನವಾದುದು ಎಂಬುದ ವಕೀಲರುಗಳ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಒಂದಿಷ್ಟು ಅ ಪೂರಕ ಅಧ್ಯಯನ ಮಾಡಬೇಕಿದೆ. ಹೈಕೋರ್ಟ್ ನಲ್ಲಿ ನುರಿತ ವಕೀಲರುಗಳ ಸಂಪರ್ಕಿಸುವಂತೆ ಸೂಚಿಸಿದರು. ಬಜೆಟ್ ಘೋಷಣೆ ಎಂಬುದು ಆಯಾ ಸರ್ಕಾರದ ಭರವಸೆ ಆಗಿದೆ. ಆ ಭರವಸೆ ನಂಬಿಯೇ ಜನರು ಅನೇಕ ಕನಸು ಕಂಡಿರುತ್ತಾರೆ. ನೀರಾವರಿ ಯೋಜನೆ ಜಾರಿಯಿಂದ ಹಲವರು ಹಸಿರು ಕನಸುಗಳ ಕಟ್ಟಿಕೊಂಡಿರಬಹುದು. ಈ ಕನಸುಗಳ ನನಸು ಮಾಡುವುದು ಸರ್ಕಾರದ ಕರ್ತವ್ಯ. ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಕಾಯ್ದಿರಿಸಿದ್ದರೆ ನಂತರದಲ್ಲಿ ಅದು ಎಲ್ಲಿಗೆ ಖರ್ಚು ಆಯ್ತು ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ. ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸುಸ್ತಾಗಿ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದೇವೆ ಎಂಬ ಅಂಶ ರಿಟ್‌ನಲ್ಲಿ ಪ್ರಸ್ತಾಪಿಸಬೇಕಿದೆ ಎಂದು ನ್ಯಾಯಮೂರ್ತಿ ಬಿಲ್ಲಪ್ಪ ನೀರಾವರಿ ಅನುಷ್ಠಾನ ಸಮಿತಿ ನಿಯೋಗಕ್ಕೆ ಸಲಹೆ ಮಾಡಿದರು. ಸರ್ವೋದಯ ಕರ್ನಾಟಕದ ಜೆ.ಯಾದವರೆಡ್ಡಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.