ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಲಪತಿ
ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆಯುತ್ತಿರಲಿ, ಆ ವಿದ್ಯಾರ್ಥಿಗಳು ಪತ್ರಿಕಾ ಲೇಖನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಪತ್ರಿಕೋದ್ಯಮವು ಕಷ್ಟದ ಕಾಲದಲ್ಲಿ ಇತ್ತು. ಅನೇಕ ಪತ್ರಕರ್ತರು ಸವಾಲಿನ ಜೊತೆಗೆ ಕಷ್ಟಪಡುತ್ತಿದ್ದರೂ, ಆದರೆ ಇಂದಿನ ಆಧುನಿಕ ತಂತ್ರಜ್ಞಾನದಿಂದ ಕನ್ನಡ ಪತ್ರಿಕೋದ್ಯಮ ಹಾಗೂ ಮುದ್ರಣ ಮಾಧ್ಯಮ ವಿಭಿನ್ನ ರೀತಿಯಲ್ಲಿ ಬೆಳೆದು ನಿಂತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಕನ್ನಡ ಪತ್ರಿಕೋದ್ಯಮವು ಅಪಾರವಾದ ಕೊಡುಗೆ ನೀಡಿದೆ. ಭಾಷಾ, ಚಲನಚಿತ್ರದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಪಾತ್ರ ಬಹು ದೊಡ್ಡದಾಗಿದೆ. ಪ್ರತಿಯೊಬ್ಬರೂ ಪತ್ರಕರ್ತರಾಗಿ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡಬೇಕು. ವಿದ್ಯಾರ್ಥಿಗಳು ಲೇಖನ, ಕವಿತೆ ಹಾಗೂ ಕಥೆಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ನಿಮ್ಮ ಬರವಣಿಗೆಯಿಂದ ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಸಿ.ಐ. ಚಲವಾದಿ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ಬದಲಾವಣೆಗೆ ಪತ್ರಿಕೋದ್ಯಮ ಒಂದು ಭಾಗವಾಗಿದೆ. ಸಮಾಜದ ಆಗು ಹೋಗುಗಳ ಅರಿವಿನ ಬಗ್ಗೆ ಜನರಿಗೆ ಕಿವಿ ಹಿಂಡಿ ಹೇಳುವ ಹಕ್ಕು ಪತ್ರಿಕೋದ್ಯಮಕ್ಕೆ ಇದೆ. ಒಳ್ಳೆ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಕುಲಸಚಿವ ಕೆ.ವಿ. ಪ್ರಸಾದ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ರಂಗನಾಥ ಕೋಳೂರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿ ಈರಣ್ಣ ನಿರೂಪಿಸಿದರು. ಭಾನುಪ್ರಕಾಶ್ ಸ್ವಾಗತಿಸಿದರು. ವೈಷ್ಣವಿ ಪ್ರಾರ್ಥಿಸಿ, ಶಿವರಾಜ್ ವಂದಿಸಿದರು.