ಯಾದಗಿರಿ: ಆರ್ಥಿಕ, ಸಾಮಾಜಿಕ ಗಣತಿಯಲ್ಲಿ ಬಾಬಾ ಸಾಹೇಬರ ಎಲ್ಲ ಅನುಯಾಯಿಗಳು ಧರ್ಮ ಕಾಲಂ 8ರಲ್ಲಿ ‘ಬೌದ್ಧ’ ಎಂದೇ ಬರೆಸಬೇಕು, ಜಾತಿ ಕಾಲಂ ನಂ 9ರಲ್ಲಿ ಪರಿಶಿಷ್ಟ ಜಾತಿ ‘ಹೊಲೆಯ’, ‘ಛಲವಾದಿ’ ಇತ್ಯಾದಿ ಬರೆಸಬೇಕು, ಉಪ ಜಾತಿಯಲ್ಲಿ ಹೊಲೆಯ ಎಂದೇ ಬರೆಸಬೇಕು ಎಂದು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಶ್ರೀಶೈಲ ಹೊಸಮನಿ, ಈಗಾಗಲೇ ಕಳೆದ 1990 ರಲ್ಲಿಯೇ ಅಂದಿನ ಪ್ರಧಾನಿ ವಿ. ಪಿ.ಸಿಂಗ್ ಸರ್ಕರದಲ್ಲಿ ತಿದ್ದುಪಡಿ ಆಗಿದ್ದು, ಭಾರತ ಮೂಲದ ಧರ್ಮಗಳಾದ ಬುದ್ಧ, ಜೈನ, ಸಿಖ್ ಈ ಮೂರು ಧರ್ಮಗಳಿಗೆ ಮತಾಂತರವಾದರೂ ದಲಿತರ ಹಕ್ಕುಗಳು ಮುಂದುವರೆಯಲಿವೆ ಎಂಬ ಸಂಗತಿ ಬಹುಜನರಿಗೆ ಗೊತ್ತಿಲ್ಲ. ಇದನ್ನು ಮನಗಂಡು ಎಲ್ಲರೂ ಬೌದ್ಧ ಧರ್ಮ ಎಂದೇ ಬರೆಸಬೇಕೆಂದು ಮನವಿ ಮಾಡಿದರು.ಆದರೆ, ಕ್ರೈಸ್ತ್, ಇಸ್ಲಾಂಗಳಿಗೆ ಮತಾಂತರ ಆದರೆ ಮೀಸಲಾತಿ ಸೌಲತ್ತು ಸಿಗುವುದಿಲ್ಲ. ಆದ್ದರಿಂದ ಬಹುತೇಕ ಕ್ರೈಸ್ತಕ್ಕೆ ಮತಾಂತರವಾಗುವವರು ಅದನ್ನು ಬಿಟ್ಟು ಪರಿಪೂರ್ಣವಾಗಿರುವ ಬೌದ್ಧ ಮತಕ್ಕೆ ಬಂದು ಮೀಸಲಾತಿ ಉಳಿಸಿಕೊಳ್ಳಬೇಕು ಎಂದು ಮುಖಂಡರು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖಂಡ ಡಾ.ಗಾಳೆಪ್ಪ ಪೂಜಾರಿ, ದೇಶದ ಹೊರಗಿನ ಮತಗಳಿಗೆ ಮತಾಂತರವಾಗುವುದಕ್ಕಿಂತ ಬೌದ್ಧ ಧರ್ಮಕ್ಕೆ ಬರುವುದರಿಂದ ಬಾಬಾಸಾಹೇಬರ ಆಶಯವೂ ಈಡೇರಿಸಿದಂತಾಗುತ್ತಿದ್ದು ದಲಿತರು ದಲಿತೇತರರು ಸಹ ಬೌದ್ಧಕ್ಕೆ ಆಗಮಿಸಿದಲ್ಲಿ ಸ್ವಾಗತಿಸಲಾಗುವುದು ಎಂದು ಹೇಳಿದರು.ಸಂಘಟನೆಯ ಹಿರಿಯ ಮುಖಂಡರಾದ ಡಾ. ಭಗವಂತ ಅನವಾರ, ಮರೆಪ್ಪ ಚಟ್ಟೇರಕರ್, ನಾಗಣ್ಣ ಕಲ್ಲದೇವನಹಳ್ಳಿ, ಶರಣು ಎಸ್. ನಾಟೇಕರ್, ಭೀಮಣ್ಣ ಹಸಮನಿ, ಗೋಪಾಲ ತೆಳಗೇರಿ, ವೆಂಕಟೇಶ ಹೊಸಮನಿ ಸುರಪುರ, ಮರೆಪ್ಪ ಬುಕ್ಕಲೊ, ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಡಿಗೇರ, ಹೊನ್ನಪ್ಪ ಗಂಗನಾಳ, ಶಿವಕುಮಾರ ತಳವಾರ ಅನೇಕರು ಹಾಜರಿದ್ದರು.