ಸರ್ಕಾರಿ ಕಡತಗಳ ಮೇಲೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಬರೆಸಿ: ನಾಗಣ್ಣ ಗೌಡ

KannadaprabhaNewsNetwork |  
Published : Jun 18, 2025, 11:49 PM IST
ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ, ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಮಕ್ಕಳ ಕುರಿತು ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ.

ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ, ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಕಾನೂನಾತ್ಮಕ ದಾಖಲೆ ಹೊರತುಪಡಿಸಿ ಉಳಿದ ಎಲ್ಲಾ ಕಡತಗಳ ಮೇಲೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬ ಟ್ಯಾಗ್‌ಲೈನ್‌ ಮುದ್ರಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಆರ್.ಟಿ.ಇ-2009, ಪೋಕ್ಸೋ-2012 ಹಾಗೂ ಬಾಲ ನ್ಯಾಯ ಕಾಯಿದೆ-2015 ರ ಅನುಷ್ಠಾನದ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ, ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಕುರಿತು ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಪೊಲೀಸ್, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಮಕ್ಕಳಿಗೊಸ್ಕರ ಸೇವೆ ಮಾಡುವ ಸದವಕಾಶ ಇದೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ, ಅವರನ್ನು ಅರ್ಥ ಮಾಡಿಕೊಳ್ಳಿ, ಅವರಿಗಾಗಿ ಉತ್ತಮ ಸೇವೆ ನೀಡಬೇಕು. ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಪೋಕ್ಸೋ ಪ್ರಕರಣಗಳು, ಬಾಲ್ಯ ವಿವಾಹಗಳು ನಿಯಂತ್ರಿಸಲು ಸರ್ಕಾರದ ಸುತ್ತೋಲೆಗಿಂತ ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಮಕ್ಕಳಿಗೆ ಆನ್‌ಲೈನ್ ಚಟುವಟಿಕೆಗಳು ಮತ್ತು ಮಾದಕ ವಸ್ತುಗಳು ವಿಪರೀತ ಮಾರಕವಾಗಿವೆ. ಅಧಿಕಾರಿಗಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನಿರ್ಮಿತಗೊಂಡ ಕೃಷಿ ಹೊಂಡಗಳು, ಬೊರವೆಲ್‌ಗಳು ಸುತ್ತ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ವಿಫಲಗೊಂಡ ಬೊರವೆಲ್‌ಗಳನ್ನು ಮುಚ್ಚದೇ ಅವಘಡಗಳು ಸಂಭವಿಸಿದರೇ ಅಧಿಕಾರಿಗಳನ್ನು ನೇರಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸಲಾಗುವುದು. ಕೆಎಸ್‌ಆರ್‌ಟಿಸಿ ಎಲ್ಲಾ ಚಾಲಕರಿಗೆ, ನಿರ್ವಾಹಕರಿಗೆ ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಮಕ್ಕಳ ರಕ್ಷಣಾ ನೀತಿ ಕುರಿತು ತರಬೇತಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಬಾಲ್ಯ ವಿವಾಹ ವಿರುದ್ಧ ಜಾಗೃತಿ ಮೂಡಿಸುವ ಅಡಿಯೋಗಳನ್ನು ಪ್ರಚಾರ ಪಡಿಸಬೇಕು ಎಂದರು.

ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಮಾತನಾಡಿ, ಅಬಕಾರಿ ಇಲಾಖೆ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ವಹಿಸಬೇಕು. ಶಾಲಾ, ಕಾಲೇಜು, ಹಾಸ್ಟೆಲ್ ಅಕ್ಕಪಕ್ಕದಲ್ಲಿ ಮದ್ಯಮಾರಾಟ ಮಾಡುತ್ತಿರುವ ಬಗ್ಗೆ ಸರ್ವೇ ನಡೆಸಬೇಕು. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇಲಾಖೆಯಿಂದ ಮೇಲ್ವಿಚಾರಣೆ ಹೆಚ್ಚಿಸಬೇಕು ಎಂದು ಸೂಚಿಸಿದರು.ಆಯೋಗದ ಸದಸ್ಯರಾದ ಶಶಿಧರ ಕೊಸಂಬೆ, ಡಾ. ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿದರು.

ಆಯೋಗದ ಸದಸ್ಯರ ಭೇಟಿ ವೇಳೆ ಹಂಪಿ ಗ್ರಾಪಂ ವ್ಯಾಪ್ತಿಯಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಉಂಕಿ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ