ಹಿರೇಕೆರೂರು: ರಾಜ್ಯ ಸರಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಾತಿಗಣತಿದಾರರು ಮನೆಗೆ ಬಂದಾಗ ಧರ್ಮಕಾಲಂನಲ್ಲಿ ವೀರಶೈವ ಲಿಂಗಾಯತ ಮತ್ತು ಜಾತಿ ಕಾಲಂದಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಎಂದು ವೀರಶೈವ ಪಂಚಮಸಾಲಿ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಎಮ್.ಎಮ್. ಹುಲ್ಮನಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರತಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯ ಸೆ. 22 ಆರಂಭಗೊಂಡಿದೆ. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜದ ಜನ ಎಷ್ಟು ಇದೆ ಎಂಬುದರ ಬಗ್ಗೆ ನಿಖರವಾದ ಅಂಕಿಅಂಶ ದೊರೆಯುತ್ತಿಲ್ಲ. ಹೀಗಾಗಿ ನಾವು ಸರಕಾರದ ಸೌಲಭ್ಯಗಳಿಂದ ವಂಚಿತವಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಆದ್ದರಿಂದ ಗಣತಿದಾರರು ಮನೆಗೆ ಬಂದಾಗ ಲಿಂಗಾಯತ, ಕಾಲಂ ನಂಬರ 9ರ ಜಾತಿ ಕಾಲಂದಲ್ಲಿ ಲಿಂಗಾಯತ ಪಂಚಮಸಾಲಿ ಹಾಗೂ ಕ್ರಮ ಸಂಖ್ಯೆಕಾಲಂದಲ್ಲಿ ಕೋಡ್ ನಂಬರ್ ಎ-0868 ಎಂದು ತಪ್ಪದೇ ನಮೂದಿಸಬೇಕು. ಜಾತಿಗಣತಿ ಮಾಡುವ ಸಮಯದಲ್ಲಿ ಗಣತಿದಾರರು ಮನೆಗಳಿಗೆ ತೆರಳಿದಾಗ ಹಳ್ಳಿಯ ಜನರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರುದ್ರಗೌಡ ಪಾಟೀಲ, ರುದ್ರಮುನ ಹುಲ್ಮನಿ, ನೀಲಮ್ಮ ಹೊಸಮನಿ, ಬಸಮ್ಮ ಅಬಲೂರ, ಪ್ರಜಾ ಅಂಗಡಿ, ಮಲ್ಲಿಕಾರ್ಜುನ ಶಿರಸಂಗಿ, ಸತೀಶ ಕೋರಿಗೌಡ್ರ, ಮಲ್ಲೇಶಪ್ಪ ಹಾದ್ರಿಹಳ್ಳಿ, ರಾಜು ತಿಪ್ಪಶೇಟ್ಟಿ, ಕೊಟ್ರೇಶ ಅಂಗಡಿ, ಶಿವಾನಂದ ಪೂಜಾರ, ಎಸ್.ಎಮ್. ಕಟಾಪೂರ, ಪ್ರವೀಣ ಅಬಲೂರ, ಹೊಳಬಸಪ್ಪ ಬಣಕಾರ, ಕುಮಾರ ಬಣಕಾರ ಇದ್ದರು.ಇಂದು ಪಂಚಮಸಾಲಿ ಸಭೆ: ಸೆ. 24ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಮಾಸೂರು ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಸಭಾಭವನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ನಿಮಿತ್ತ ತಾಲೂಕಿನ ಪಂಚಮಸಾಲಿ ಸಮೂದಾಯದ ಸರ್ವ ಬಂಧುಗಳ ಸಭೆಯನ್ನು ಕರೆಯಲಾಗಿದೆ. ತಾಲೂಕಿನ ಪಂಚಮಸಾಲಿ ಬಂಧುಗಳು ತಪ್ಪದೇ ಸಭೆಗೆ ಹಾಜರಾಗುವಂತೆ ವೀರಶೈವ ಪಂಚಮಸಾಲಿ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಎಮ್.ಎಮ್. ಹುಲ್ಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.