ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿರಿ-ಪಾಟೀಲ್‌

KannadaprabhaNewsNetwork | Published : May 6, 2025 12:17 AM

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಉಪಜಾತಿಗಳನ್ನು ಮಾಡಿಕೊಂಡು ಎಲ್ಲರೂ ದಿಕ್ಕೆಟ್ಟು ಹೋಗಿದ್ದೇವೆ. ಬಸವಣ್ಣನವರು ಹೇಳಿದ್ದು ಹೆಣ್ಣು ಮತ್ತು ಗಂಡು ಎಂಬ 2 ಜಾತಿಗಳನ್ನು ಮಾತ್ರ. ನಾವು ಹಾಗೆ ನಡೆದುಕೊಂಡಿದ್ದರೆ ಕರ್ನಾಟಕದಲ್ಲಿ ಶೇ. 90ರಷ್ಟು ಲಿಂಗಾಯತರೇ ಇರುತ್ತಿದ್ದೆವು. ಆದ್ದರಿಂದ ಬರುವ ಜನಗಣತಿಯಲ್ಲಿ ಉಪಜಾತಿಯನ್ನು ಬರೆಸದೇ ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ಉಪಜಾತಿಗಳನ್ನು ಮಾಡಿಕೊಂಡು ಎಲ್ಲರೂ ದಿಕ್ಕೆಟ್ಟು ಹೋಗಿದ್ದೇವೆ. ಬಸವಣ್ಣನವರು ಹೇಳಿದ್ದು ಹೆಣ್ಣು ಮತ್ತು ಗಂಡು ಎಂಬ 2 ಜಾತಿಗಳನ್ನು ಮಾತ್ರ. ನಾವು ಹಾಗೆ ನಡೆದುಕೊಂಡಿದ್ದರೆ ಕರ್ನಾಟಕದಲ್ಲಿ ಶೇ. 90ರಷ್ಟು ಲಿಂಗಾಯತರೇ ಇರುತ್ತಿದ್ದೆವು. ಆದ್ದರಿಂದ ಬರುವ ಜನಗಣತಿಯಲ್ಲಿ ಉಪಜಾತಿಯನ್ನು ಬರೆಸದೇ ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಅವರು ಸೋಮವಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಬೆಂಗಳೂರು, ತಾಲೂಕು ಘಟಕ ಮುಂಡರಗಿ ಹಾಗೂ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬಸವ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಜನಗಣತಿಯಲ್ಲಿ ಒಂದು ತೀರ್ಮಾನ ಮಾಡಿ ಬರೆಸದಿದ್ದರೆ ಮುಂಬರುವ ದಿನಗಳಲ್ಲಿ ಲಿಂಗಾಯತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ರಾಜ್ಯದಲ್ಲಿಯೇ ಹಿರಿಯ ಸ್ವಾಮೀಜಿಯವರಾದ ಮುಂಡರಗಿ ಜ.ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಯವರು ಇತರೆ ಎಲ್ಲ ಸ್ವಾಮೀಜಿಯವರನ್ನು ಒಂದೆಡೆ ಸೇರಿಸಿ ಜನಗಣತಿಯಲ್ಲಿ ಏನು ಬರೆಸಬೇಕೆನ್ನುವ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಪ್ರೊ.ಎ.ವೈ.ನವಲಗುಂದ ಶರಣರು ಹಾಗೂ ಸಾಮಾಜಿಕ ಸಮಾನತೆ ಕುರಿತು ಮಾತನಾಡಿ, 12ನೇ ಶತಮಾನದ ಶರಣ ಚಳ‍ುವಳಿಗೆ ಅಸ್ತಿತ್ವವನ್ನು ನೀಡಿದವರು 20ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್. 770 ಜನ ಅಮರ ಗಣಂಗಳನ್ನು ಹೊಂದಿದ್ದ ಸಮಾಜೋ ಧಾರ್ಮಿಕ ಸಂಸತ್ತು ಎಂದರೆ ಅದು ಅಂದಿನ ಅನುಭವ ಮಂಟಪ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ನಾವು ಬಸವಾದಿ ಶಿವಶರಣರ ವಚನಗಳನ್ನು ಸ್ಪಷ್ಟವಾಗಿ ಕಾಣುತ್ತೇವೆ. ಜಡಸಂಸ್ಕೃತಿಗೆ ಚೈತನ್ಯ ಸಂಸ್ಕೃತಿ ತುಂಬಿದವರು ಬಸವಾದಿ ಶಿವಶರಣರು ಎಂದರು.

ಸಾನಿಧ್ಯವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿಯವರು ಮಾತನಾಡಿ, ಬಸವಣ್ಣನವರು ಈ ಯುಗದ ಉತ್ಸಾಹ, ಅವರ ತತ್ವಗಳನ್ನು ಹೇಳುವವರು ಸಾಕಷ್ಟು ಜನ ಇದ್ದಾರೆ, ಅದರಂತೆ ನಡೆದುಕೊಳ್ಳುವವರು ಮಾತ್ರ ವಿರಳ. ಅವರು ಜಾತ್ಯತೀತ ಮನೋಭಾವನೆ ಬೆಳೆಸುವುದರೊಂದಿಗೆ ಕಾಯಕ-ದಾಸೋಹವನ್ನು ಪ್ರತಿಪಾದಿಸಿದವರು. ಇಲ್ಲಿ ಜಾತಿ ಮುಖ್ಯವಲ್ಲ, ನೀತಿ ಮುಖ್ಯವಾಗುತ್ತದೆ. ಲಿಂಗ ಸಂಸ್ಕೃತಿಯು ಅಪರೂಪದ ಸಂಸ್ಕೃತಿ. ಅದನ್ನು ಎಲ್ಲರೂ ಬೆಳೆಸಬೇಕು. ಹಾನಗಲ್ ಕುಮಾರಸ್ವಾಮಿಗಳು 1904ರಲ್ಲಿ ವೀರಶೈವ ಮಹಾಸಭೆಯನ್ನು ರಚಿಸಿದರು. ಅದು ಈಗ ವೀರಶೈವ ಲಿಂಗಾಯತ ಮಹಾಸಭೆಯಾಗಿದೆ. ವೀರಶೈವ-ಲಿಂಗಾಯತ ಧರ್ಮವನ್ನು ಪ್ರತಿಪಾದಿಸಿದವರು ಬಸವಣ್ಣನವರಲ್ಲ, ಅದನ್ನು ಪ್ರತಿಪಾದಿಸಿದವರು ಪರಶಿವನು ಎಂದು ಆಗಮಗಳು ಹೇಳುತ್ತವೆ. ಲಿಂಗ ಧರಿಸಿದವರೆಲ್ಲರೂ ಲಿಂಗವಂತರು. ಈ ಇಷ್ಟಲಿಂಗಕ್ಕೆ ಅನಿಷ್ಟವನ್ನು ಕಳೆಯುವ ಶಕ್ತಿ ಇದೆ ಎಂದರು. ಕಲಕೇರಿ-ವಿರೂಪಾಪುರದ ಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವವನ್ನು ವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಸದಸ್ಯ ಸಂಗನಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ಎಸ್.ಎಸ್. ಗುಡಿಮನಿ ಮಾತನಾಡಿದರು.

ತಾಲೂಕು ಘಟಕದ ಅಧ್ಯಕ್ಷ ಶಿವನಗೌಡ ಡೋಣಿ ಅಧ್ಯಕ್ಷತೆ ವಹಿಸಿದ್ದರು. ಚನ್ನವೀರಯ್ಯ ಹುಣಸಿಕಟ್ಟಿ, ಶಿವಪ್ಪ ಅಂಕದ, ವಿಜಯಲಕ್ಷ್ಮೀ ಮಾನ್ವಿ, ಶೇಖರಗೌಡ ಪಾಟೀಲ, ವಿರುಪಾಕ್ಷಪ್ಪ ಲಕ್ಕುಂಡಿ, ಗುಡದೀರಯ್ಯ ಹಿರೇಮಠ, ಡಾ.ಅಕ್ಕಮಹಾದೇವಿ ಹಿರೇಮಠ, ಕಾಶಿನಾಥ ಶಿರಬಡಗಿ, ದೇವಪ್ಪ ಕುಕನೂರ, ಶಾರದಾ ಹಕ್ಕಂಡಿ, ಲತಾ ಪೂಜಾರ, ಎಸ್.ಬಿ.ಕೆ. ಗೌಡರ, ಆರ್.ಎಲ್.ಪೊಲೀಸಪಾಟೀಲ, ಎಂ.ಜಿ. ಗಚ್ಚಣ್ಣವರ, ಆರ್.ಕೆ. ರಾಯನಗೌಡ್ರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಂಕರ ಕುಕನೂರ ಸ್ವಾಗತಿಸಿದರು. ಎಸ್.ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಪಾಟೀಲ ನಿರೂಪಿಸಿದರು. ಹಾಲಯ್ಯ ಹಿರೇಮಠ ವಂದಿಸಿದರು.

Share this article