ರಾಜ್ಯ ಸರ್ಕಾರಕ್ಕೆ ಆಗ್ರಹ । ಛತ್ರಪತಿ ಶಿವಾಜಿ ಮಹಾರಾಜರ ತಂದೆ ಸಮಾಧಿ ರಾಷ್ಟ್ರೀಯ ಸ್ಮಾರಕ ಮಾಡಲು ಮನವಿ
ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಮಹಾನ್ ಯೋಧ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿ ಸ್ಮಾರಕದ ಬಾಕಿ ಕೆಲಸ ಪೂರ್ಣಗೊಳಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಮಹಾರಾಷ್ಟ್ರದ ಪುಣೆಯ ಹಿರಿಯ ಲೇಖಕ, ಇತಿಹಾಸ ಸಂಶೋಧಕ, ಮಾವ್ಲಾ ಜವಾನ್ ಸಂಸ್ಥೆಯ ಸಂಸ್ಥಾಪಕ ದತ್ತಾಜಿ ಲಕ್ಷ್ಮಣ್ ನಲವಡೆ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರೂವರೆ ಶಕತಮಾನಗಳಿಂದ ಹೊದಿಗೆರೆಯಲ್ಲಿ ಸ್ವತಂತ್ರ ರಾಷ್ಟ್ರದ ಸಂಸ್ಥಾಪಕ ಮತ್ತು ಭಾರತದ ಮಹಾನ್ ರಾಷ್ಟ್ರ ಪುರುಷ ಷಹಾಜಿ ರಾಜೇ ಬೋಸ್ಲೆ ಸಮಾಧಿ ಸ್ಮಾರಕವಾಗಿದ್ದು, ಅದಕ್ಕೆ ಕಾಯಕಲ್ಪ ನೀಡುವ ಕೆಲಸವನ್ನು ಆದ್ಯತೆ ಮೇಲೆ ಮಾಡಬೇಕು ಎಂದರು.ಷಹಾಜಿ ರಾಜೇ ಬೋಸ್ಲೆಂ 1664ರ ಜ.1ರಂದು ಇದೇ ಹೊದಿಗೆರೆ ಅರಣ್ಯ ಪ್ರದೇಶದಲ್ಲಿ ಕಾಲವಾದರು. ಷಹಜಿಯವರ ವೀರಪುತ್ರ ಛತ್ರಪತಿ ಶಿವಾಜಿ ಮಹಾರಾಜರು ವಿಶ್ವದ ಮೊದಲ ಪ್ರಜಾಪ್ರಭುತ್ವ ರಾಷ್ಟ್ರದ ಸೃಷ್ಟಿಕರ್ತರಾಗಿದ್ದು, ಅದೇ ಸ್ಥಳದಲ್ಲಿ ಷಹಾಜಿಯವರ ಸಮಾಧಿ ಸ್ಮಾರಕ ಸ್ಥಾಪಿಸಿದರು. ಷಹಾಜಿಯವರ ಮರಣ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ಜ.23ರಂದು ಈ ಸ್ಥಳದಲ್ಲೇ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಹೊದಿಗೆರೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದಿಂದ ಷಹಾಜಿ ರಾಜೇ ಬೋಸ್ಲೆಯವರ ಭವ್ಯವಾದ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಬೇಕು. ದೇಶದ ಇತಿಹಾಸಕ್ಕೆ ಅಪ್ರತಿಮ ದೇಶಭಕ್ತ ಛತ್ರಪತಿ ಶಿವಾಜಿ ಮಹಾರಾಜರಂತಹ ಮಗನನ್ನು ನೀಡಿದ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಡೆಗೆ ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ದತ್ತಾಜಿ ಲಕ್ಷ್ಮಣ ನಲವಡೆ ಮನವಿ ಮಾಡಿದರು.
ಇಂದು ಷಹಾಜಿಯವರ 361ನೇ ಪುಣ್ಯಾರಾಧನೆ:
ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ದತ್ತ ಪೀಠದ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸಾನಿಧ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ವೈ.ಮಲ್ಲೇಶ ರಾವ್ ಸಿಂಧೆ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಹೇಳಿದರು.