ತರೀಕೆರೆ ಅಜ್ಜಂಪುರ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜೂನ್ 30 ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನಾಧ್ಯಕ್ಷರಾಗಿ, ಚಿಕ್ಕಮಗಳೂರು ಜಿಲ್ಲೆಯ ಸಾಹಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಶ್ರಾಂತ ಉಪ ನಿರ್ದೇಶಕಿ ಡಾ.ಮಂಜುಳ ಹುಲ್ಲಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಜಾಪ ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಮ್ಮ ಎಂ.ಎಸ್. ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತರೀಕೆರೆ
ಅಜ್ಜಂಪುರ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜೂನ್ 30 ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನಾಧ್ಯಕ್ಷರಾಗಿ, ಚಿಕ್ಕಮಗಳೂರು ಜಿಲ್ಲೆಯ ಸಾಹಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಶ್ರಾಂತ ಉಪ ನಿರ್ದೇಶಕಿ ಡಾ.ಮಂಜುಳ ಹುಲ್ಲಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಜಾಪ ಮಹಿಳಾ ಘಟಕ ಅಧ್ಯಕ್ಷೆವಿಶಾಲಾಕ್ಷಮ್ಮ ಎಂ.ಎಸ್. ತಿಳಿಸಿದ್ದಾರೆ.
ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಮಹಿಳಾ ಘಟಕ ಚಿಕ್ಕಮಗಳೂರು, ಅಜ್ಜಂಪುರ ತಾಲೂಕು ಮಹಿಳಾ ಘಟಕದಿಂದ ಆಯೋಜಿಸಿರುವ ಸಮ್ಮೇಳದಲ್ಲಿ ಬಹುಮುಖ ಪ್ರತಿಭೆ ಡಾ. ಮಂಜುಳಾ ಹುಲ್ಲಹಳ್ಳಿ ಅವರು ತಮ್ಮ ಬಹುಮುಖ ಪ್ರತಿಭೆ, ಅಧ್ಯಯನ ಪರ ಮನೋಭಾವ ಹಾಗೂ ಸಾಂಸ್ಕೃತಿಕ ಬದ್ಧತೆಗೆ ವಿಶಿಷ್ಟ ಗುರುತು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದವರಾದ ಇವರು, ಬಾಲ್ಯದಿಂದಲೇ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡು ಬೆಳೆದವರು.
ಎಂ.ಎ (ಕನ್ನಡ) ಮತ್ತು ಜಾನಪದ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ. ಮಂಜುಳಾ ಅವರು ನಂಜನಗೂಡು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಮಹತ್ವದ ಸಂಶೋಧನಾ ಪ್ರಬಂಧದ ಮೂಲಕ ಜಾನಪದ ಪರಂಪರೆ ವೈಶಿಷ್ಟ್ಯತೆಗಳನ್ನು ಅನಾವರಣಗೊಳಿಸಿದ್ದಾರೆ. ಅವರ ಸಂಶೋಧನೆ ಕೇವಲ ಅಕಾಡೆಮಿಕ್ ವಲಯದಲ್ಲಷ್ಟೇ ಅಲ್ಲದೆ, ಜಾನಪದ ಅಧ್ಯಯನಕ್ಕೆ ಆಸಕ್ತ ವಿದ್ಯಾರ್ಥಿಗಳು ಮತ್ತು ಸಂಶೋಧ ಕರಿಗೂ ಮಾರ್ಗದರ್ಶಕವಾಗಿವೆ.
ಸರ್ಕಾರಿ ಸೇವೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸೇವಾ ಅವಧಿಯಲ್ಲಿ ಹಲವು ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಿರುವುದು ಸಂಘಟನೆ ಸಾಮರ್ಥ್ಯದ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಡಾ. ಮಂಜುಳಾ ಹುಲ್ಲಹಳ್ಳಿ ಕೊಡುಗೆ ಅತ್ಯಂತ ವೈವಿಧ್ಯಮಯ. ಕವಳಿಗೆ, ಕದಳಿಯ ಬನದೊಳಗೆ, ಕುವೆಂಪು ಕೃತಿಗಳ ಕೈಪಿಡಿ, ಕುವೆಂಪು ಎಂದರೆ ಪುರಾತನ ನೆನಪಿನಲ್ಲಿ ಸಾಹೇಬರ ಮಗಳು ಸೇರಿದಂತೆ ಅನೇಕ ಕೃತಿ ರಚಿಸಿ ವಿಮರ್ಶೆ, ಕಥನ, ಪ್ರವಾಸ ಸಾಹಿತ್ಯ, ವಚನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಹಿಳಾ ಸಾಹಿತ್ಯ ಕುರಿತು ಬರೆದ ವಿಮರ್ಶೆಗಳು ವಿಶೇಷ ಗಮನ ಸೆಳೆದಿವೆ.
ಚಿಕ್ಕಮಗಳೂರು ನೆಲೆ-ಬೆಲೆ ಎಂಬ ಮೂರು ಭಾಗಗಳ ಕೃತಿಗಳ ಮೂಲಕ ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭೌಗೋಳಿಕ ವೈಶಿಷ್ಟ್ಯತೆ ದಾಖಲಿಸುವ ಮಹತ್ವದ ಕೆಲಸ ಮಾಡಿದ್ದಾರೆ. ಈ ಕೃತಿಗಳು ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿ ಅರಿಯುವವರಿಗೆ ಮಾರ್ಗದರ್ಶಕವಾಗಿವೆ.
ಸಂಪಾದಕರಾಗಿ ಹಲವು ಸಂಕಲನಗಳನ್ನು ಹೊರತಂದು, ಹೊಸ ಬರಹಗಾರರಿಗೆ ವೇದಿಕೆ ಒದಗಿಸಿ ರುವುದು ಅವರ ಮತ್ತೊಂದು ಸಾಧನೆ. ಅಮೃತ ಮಂಡ್ಯ, ಹಸಿರು ಸಿರಿ, ರಾಷ್ಟ್ರಭೂಷಣ ಸೇರಿದಂತೆ ಅನೇಕ ಕೃತಿಗಳ ಮೂಲಕ ಸಾಹಿತ್ಯಿಕ ವಲಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದಾರೆ.
ಅವರ ಸೇವೆ ಗುರುತಿಸಿ ರಾಜ್ಯ ಕಸಾಪ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಪ್ರಶಸ್ತಿ, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸರ್ವೋತ್ತಮ ಸೇವಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ನೀಡಿದೆ. ಅಳಸಿಂಗ ಪೆರುಮಾಳ್ ಪ್ರಶಸ್ತಿ ಹಾಗೂ ಮಹಿಳಾ ಸಾಧಕಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಸಾಧನೆಗೆ ಸಾಕ್ಷಿಯಾಗಿದೆ.
ಡಾ. ಮಂಜುಳಾ ಹುಲ್ಲಹಳ್ಳಿ ಜಾನಪದ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯತ್ತ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಯುವ ಪೀಳಿಗೆಗೆ ದಾರಿದೀಪ. ಅವರ ಜೀವನ ಸಾಧನೆಗಳು ಕನ್ನಡ ನಾಡಿನ ಹೆಮ್ಮೆಯಾಗಿ ಉಳಿಯುತ್ತಿವೆ ಎಂದು ತಿಳಿಸಿದ್ದಾರೆ.14ಕೆಟಿಆರ್.ಕೆ.4ಃ ಡಾ. ಮಂಜುಳಾ ಹುಲ್ಲಹಳ್ಳಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.