
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಮಕ್ಕಡ ಕೂಟದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ 124 ಮತ್ತು 125ನೇ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ 4ನೇ ಪುಸ್ತಕ ‘ನೆನಪಿನ ಅಲೆ’ ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಾಚರಣಿಯಂಡ ಅಪ್ಪಣ್ಣ ಅವರು ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಹೆಚ್ಚು ತಪ್ಪುಗಳು ನುಸುಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.ಬರಹಗಾರರು ತಾವು ಬರೆದ ಪುಸ್ತಕದಲ್ಲಿನ ತಪ್ಪುಗಳನ್ನು ಪರಿಶೀಲಿಸಲು ತಮಗೆ ವಿಶ್ವಾಸ ಇರುವವರಿಗೆ ಮೊದಲು ಓದಲು ನೀಡಬೇಕು. ತಪ್ಪುಗಳನ್ನು ಸರಿಪಡಿಸಿದ ನಂತರವೇ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಓದುಗರಿಗೆ ಅರ್ಪಿಸಬೇಕು. ಓದುಗರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆ ಮತ್ತು ಸಾಮಾಜಿಕ ಕಳಕಳಿಯ ಉದ್ದೇಶದಿಂದ 2013ರಲ್ಲಿ ಕೊಡವ ಮಕ್ಕಡ ಕೂಟವನ್ನು ಸ್ಥಾಪಿಸಲಾಗಿದ್ದು, ಇಂದು 13ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 2016ರಿಂದ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರಲಾಯಿತು. ಸರ್ಕಾರದ ಅನುದಾನವಿಲ್ಲದೆ ಕೇವಲ 9 ವರ್ಷಗಳಲ್ಲಿ ದಾಖಲೆಯ 125 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ ಹೆಗ್ಗಳಿಕೆ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟವು ಪುಸ್ತಕವನ್ನು ಪ್ರಕಟಣೆಗೊಳಿಸುವುದರ ಜೊತೆಯಲ್ಲಿ ಹಲವು ಸಮಾಜಮುಖಿ ಕೆಲಸದಲ್ಲಿ ಸಹ ತೊಡಗಿಸಿಕೊಂಡಿದೆ. ಕೊಡವ ಸಾಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಬರುತ್ತಿದೆ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಕ್ಯಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ವೃತ್ತವನ್ನು ನಿರ್ಮಿಸಿ, ಅದೇ ಜಾಗದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕ್ಯಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅವರ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟಕ್ಕಿದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು.
ದಾಖಲೆಯ 125 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡವ ಮಕ್ಕಡ ಕೂಟ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಪ್ರಕಟಗೊಂಡಿರುವ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಡಿಜಿಟಲೀಕರಣಗೊಳಿಸುವಂತೆ ಸಲಹೆ ನೀಡಿದರು.
ಬರಹಗಾರರಿಗೆ ಪುಸ್ತಕ ಬರೆಯುವುದು ಸುಲಭ, ಆದರೆ ಪ್ರಕಟಿಸುವುದು ಕಷ್ಟ. ಕೊಡವ ಮಕ್ಕಡ ಕೂಟ ಸಂಘಟನೆ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸುತ್ತಿದೆ ಎಂದು ಶ್ಲಾಘಿಸಿದರು.
ಸಮಾಜ ಸೇವಕಿ ಕೊಳುವಂಡ ಅನಿತಾ ಸುಬ್ಬಯ್ಯ, ಕುಳುವಂಡ ಸುಬ್ಬಯ್ಯ, ಮೂಕೋಂಡ ಪೂಣಚ್ಚ, ಮೂಕೋಂಡ ನಿತಿನ್ ಕುಶಾಲಪ್ಪ, ಲೇಖಕಿ ಐಚಂಡ ರಶ್ಮಿ ಮೇದಪ್ಪ, ಮುಕ್ಕಾಟಿರ ವಿನು, ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಉಪಸ್ಥಿತರಿದ್ದರು.