ಜನರ ನಂಬಿಕೆ ಪ್ರಶ್ನಿಸುವ ಛಾತಿ ಸಾಹಿತಿಗಳಲ್ಲಿರಲಿ: ಡಾ.ರಂಗನಾಥ ಕಂಟನಕುಂಟೆ

KannadaprabhaNewsNetwork |  
Published : Oct 27, 2025, 12:45 AM IST
(ಫೋಟೊ 26ಬಿಕೆಟಿ1, ಸಾಹಿತಿ ಡಾ.ರಂಗನಾಥ ಕಂಟನಕುಂಟೆ  ಮಾತನಾಡಿದರು) | Kannada Prabha

ಸಾರಾಂಶ

ವಿಮರ್ಶೆ ಪ್ರಜ್ಞೆ ಮತ್ತು ಬಂಡಾಯ ಮನೋಭಾವದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮ ತರಲು ಸಾಧ್ಯ. ಇತ್ತೀಚಿನ ಬರಹಗಾರರಲ್ಲಿ ಪ್ರಶ್ನಾತೀತ ಪ್ರಜ್ಞೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಾಹಿತಿ ಡಾ.ರಂಗನಾಥ ಕಂಟನಕುಂಟೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಮರ್ಶೆ ಪ್ರಜ್ಞೆ ಮತ್ತು ಬಂಡಾಯ ಮನೋಭಾವದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮ ತರಲು ಸಾಧ್ಯ. ಇತ್ತೀಚಿನ ಬರಹಗಾರರಲ್ಲಿ ಪ್ರಶ್ನಾತೀತ ಪ್ರಜ್ಞೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಾಹಿತಿ ಡಾ.ರಂಗನಾಥ ಕಂಟನಕುಂಟೆ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವ ಸಾಹಿತಿ ಸಾಹಿತ್ಯಾನುಸಂಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಬರಹಗಾರರು ಬೆಳೆಯುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬರಹಗಾರರ ಸಂಖ್ಯೆ ಹೇರಳವಾಗಿದೆ.

ಭುಜಬಲ, ಹಣಬಲಕ್ಕಿಂತ ಸಾಹಿತ್ಯದ ಶಕ್ತಿ ದೊಡ್ಡದು. ಅಧಿಕಾರ, ಸಂಪತ್ತಿನ ಹಿಂದೆ ಜಗತ್ತು ಓಡುತ್ತದೆಯಾದರೂ ಲೋಕಕ್ಕೆ ಬೇಡವಾದ ವಿಷಯವನ್ನು ಹುಡುಕುವ ಸಾಮರ್ಥ್ಯ ಸಾಹಿತಿಗಳು ಮತ್ತು ಸಾಹಿತ್ಯಕ್ಕಿದೆ. ಇತ್ತೀಚಿಗೆ ಸೋಸಿಯಲ್ ಮೀಡಿಯಾ ಆಕ್ರಮಣದಿಂದ ಓದಿನ ಆಸಕ್ತಿ ಕಳೆಗುಂದುತ್ತಿದೆ. ಪರೀಕ್ಷಾ ದೃಷ್ಟಿಯಿಂದ ಮಾತ್ರ ವಿದ್ಯಾರ್ಥಿಗಳು ಓದುತ್ತಿದ್ದು, ವ್ಯಕ್ತಿತ್ವ ವಿಕಸನ, ದೇಶದ ಅಭಿವೃದ್ಧಿಗೆ ಓದು ಬಳಕೆಯಾಗುತ್ತಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದು ಕೃತಕ ಬುದ್ಧಿಮತ್ತೆಯ ಕಾಲವಾಗಿದೆ. ಎಲ್ಲವನ್ನೂ ತಂತ್ರಜ್ಞಾನವೇ ಆವರಿಸುತ್ತಿದ್ದು, ಇದರಲ್ಲಿ ಸಾಹಿತಿಗಳು, ಓದುಗರನ್ನು ಉಳಿಸಿಕೊಳ್ಳುದು ಹೇಗೆ ಎಂದು ಗಂಭೀರವಾಗಿ ಆಲೋಚಿಸಬೇಕು. ಲೇಖಕರಿಗೆ ಪ್ರಶಸ್ತಿಯಿಂದ ಅಲ್ಲ ಓದುಗರಿಂದ ಸಂತೃಪ್ತ ಭಾವ ಮೂಡುತ್ತದೆ. ಸಾಹಿತ್ಯ ಉಳಿಸಲು ಓದುವ ಮತ್ತು ಓದುಗರನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ. ಅನಿಲ್ ಗುನ್ನಾಪುರ ರಚಿತ ಕಥಾಸಂಕಲನಗಳು ಬದುಕಿನ ನೈತಿಕತೆ ಬಗ್ಗೆ ಚಿಂತಿಸುವ ಮತ್ತು ಮಾನವನ ಮನುಷ್ಯತ್ವ ಬಡಿದೆಬ್ಬಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು.

ಕವಿಯತ್ರಿ ಮತ್ತು ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ ಮಾತನಾಡಿ, ಓದು ಮತ್ತು ಸಾಹಿತ್ಯ ರುಚಿ ರೂಢಿಸಿಕೊಂಡರೆ ಯುವ ಪ್ರತಿಭೆಗಳು ಬೆಳೆಯಲು ಸಾಧ್ಯ ಎಂದರು.ಕಥೆಗಾರ್ತಿ ಮಲ್ಲಮ್ಮ ಜೊಂಡಿ ರಚಿತ ದಿಡಗು ಕಥಾಸಂಕಲನ ಕುರಿತು ಮಾತನಾಡಿ, ಪುರುಷ ಪ್ರಧಾನ ಶೋಷಣೆಯನ್ನು ಅಚ್ಚುಕಟ್ಟಾಗಿ ಈ ಪುಸ್ತಕ ಕಟ್ಟಿಕೊಟ್ಟಿದೆ. ಮದುವೆ, ಮಕ್ಕಳು, ಸಂಸಾರದ ಬಯಕೆಗಳು ಈಡೇರದ ಹುಡುಗಿಯೊಬ್ಬಳ ಜೀವನ ಕಥೆ ಮಹಿಳೆಯರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಪುಸ್ತಕದಲ್ಲಿರುವ ಕವಿತ್ವ ಭಾಷೆ ಹಿತಮಿತವಾಗಿದ್ದು, ಓದುಗರ ಭಾವನೆ ತೆರೆದಿಡುತ್ತದೆ. ಮಹಿಳೆಯನ್ನು ಕಟ್ಟಿ ಆಳುವ ಪ್ರಯತ್ನ ಕಡಿಮೆಯಾಗಬೇಕು. ಬರವಣಿಗೆ ಕ್ಷೇತ್ರದಲ್ಲಿಯೂ ರಾಜಕೀಯವಿದ್ದು, ಅದನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಬರಹಗಾರರು ಮಾಡಬೇಕು. ಮಹಿಳಾ ಶೋಷಣೆ, ಲೈಂಗಿಕ ದೌರ್ಜನ್ಯದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಂತಹ ಕ್ರೂರ ಪ್ರಕರಣಗಳು ಹೆಚ್ಚುತ್ತಿರುವುದು ಪುರುಷ ಕ್ರೌರ್ಯತೆಯನ್ನು ಎತ್ತಿ ತೋರಿಸುತ್ತಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಕೃತಿಗಳು ಓದುಗರಿಗೆ ಮುಟ್ಟದಿದ್ದರೆ ಅದು ವ್ಯರ್ಥವಾಗುತ್ತದೆ. ಬರಹಗಾರರ ಅದೆಷ್ಟೋ ಪುಸ್ತಕಗಳ ಪರಿಚಯವನ್ನು ಬಸವೇಶ್ವರ ಕಲಾ ಮಹಾವಿದ್ಯಾಲಯ ಪರಿಚಯಿಸಿರುವುದು ಸಂತಸದ ಸಂಗತಿ. ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಶಕ್ತಿ ಭಾಷೆಗಿದ್ದು, ಅದನ್ನು ತುಂಬವ ಕೆಲಸವನ್ನು ಬರಹಗಾರರು ಮಾಡಬೇಕು ಎಂದರು.

ಕಥೆಗಾರರಾದ ಅನಿಲ್ ಗುನ್ನಾಪುರ, ಮಲ್ಲಮ್ಮ ಜೊಂಡಿ ಅಭಿಪ್ರಾಯ ಹಂಚಿಕೊಂಡರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬರಹಗಾರರು, ಯುವ ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನೈತಿಕ ಪ್ರಜ್ಞೆ, ವೈಚಾರಿಕತೆ, ಸಂವಿಧಾನಕ್ಕೆ ವಿರುದ್ಧವಾಗಿ ಸಾಗುವ ಮನಸ್ಸುಗಳಿಂದ ವಿಮರ್ಶೆ ಪ್ರಜ್ಞೆ ಮತ್ತು ಸಾಹಿತ್ಯದ ಆಸಕ್ತಿ ಸಾಯುತ್ತದೆ. ಜನರನ್ನು ವಿಚಾರವಂತರನ್ನಾಗಿಸಲು ಜನರ ನಂಬಿಕೆಗಳನ್ನು ಪ್ರಶ್ನಿಸುವ ಕೆಲಸವನ್ನು ಸಾಹಿತಿಗಳು ಮಾಡಬೇಕು. ಸಮಾಜಿಕ ಸವಾಲುಗಳನ್ನು ಸಹಜ ಪ್ರಕ್ರಿಯೆ ಎಂದು ಒಪ್ಪಿದರೆ ನೈತಿಕ ಪ್ರಜ್ಞೆ ಕಳೆದುಕೊಂಡಂತೆ. ಇದರಿಂದ ಹೊಸ ಕತೆ, ಸಾಹಿತ್ಯ ಹುಟ್ಟಲು ಸಾಧ್ಯವಾಗದು. ಬಂಡಾಯ ಮನೋಭಾವ ಕಡಿಮೆಯಾಗಿರುವುದರಿಂರ ಹಲವಾರು ರಾಜ್ಯಗಳಲ್ಲಿ ಸಾಹಿತಿಗಳು ಮರೆಯಾಗುತ್ತಿದ್ದಾರೆ. ಶಿಕ್ಷಣ, ರಾಜಕೀಯ, ಸಮಾಜ, ಕುಟುಂಬ ವ್ಯವಸ್ಥೆಯಲ್ಲಿ ವಿಮರ್ಶೆ ಪ್ರಜ್ಞೆ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ.

- ಡಾ.ರಂಗನಾಥ ಕಂಟನಕುಂಟೆ ಸಾಹಿತಿ

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ