- ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ,
ಕನ್ನಡಪ್ರಭ ವಾರ್ತೆ, ಮೂಡಿಗೆರೆಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಕಾರ್ಯಕ್ರಮದಲ್ಲಿ ಕನ್ನಡದ ಸಾಹಿತಿಗಳು, ಪ್ರಾಧ್ಯಾಪಕರು, ಚಿಂತಕರು ಭಾಷಣ ಮಾಡಲು ಸಂಭಾವನೆ ತೆಗೆದುಕೊಳ್ಳುವುದನ್ನು ಮೊದಲು ಬಿಡಬೇಕು. ಕನ್ನಡ ಭಾಷೆ ಸಂಸ್ಕೃತಿ ಉಳಿಸುವುದು ತನ್ನ ಕರ್ತವ್ಯವೆಂದು ಭಾವಿಸಿ ಭಾಗವಹಿಸಬೇಕೆಂದು ಸಾಹಿತಿ ಸಂಪತ್ ಬೆಟ್ಟಗೆರೆ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ವಿಶ್ವಮಾನವ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನ ರುದ್ಯಾನವೆಂದು ಕುವೆಂಪು ರಚಿಸಿದ ನಾಡಗೀತೆಯನ್ನು ಎಲ್ಲರೂ ದ್ವನಿ ಸೇರಿ ಹೇಳುತ್ತೇವೆ. ಅಲ್ಲದೇ ಅಂಬೇಡ್ಕರ್ ಜಾತ್ಯಾತೀತ ಸಂವಿಧಾನ ಕೊಟ್ಟಿದ್ದಾರೆಂದು ಹೇಳುತ್ತೇವೆ. ಆದರೆ, ನಮ್ಮ ಮನೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಸ್ಕೃತಿಕ ಆಚರಣೆಯಲ್ಲಿ ಜಾತೀವಾದಿಗಳಾಗಿ ತೊಡಗಿಸಿಕೊಳ್ಳುತ್ತಿರುವುದು ದುರಂತ. ನಿಜ ವಾಗಿಯೂ ಸಂವಿಧಾನ ಹಾಗೂ ಕುವೆಂಪು ಅವರ ಆಶಯವನ್ನು ನಿತ್ಯ ಅನುಸರಿಸುತ್ತಿರುವುದು ಆಟೋ ಚಾಲಕರೆಂದರೆ ತಪ್ಪಾಗಲಾರದೆಂದು ಹೇಳಿದರು. ಮೂಡಿಗೆರೆ ಬಸ್ ನಿಲ್ದಾಣದ ಜೂನಿಯರ್ ಕಾಲೇಜು ಕಾಂಪೌಂಡ್ ಬಳಿ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡದ ಕವಿಗಳ ನುಡಿಗಳಿರುವ ನಾಮ ಫಲಕ ಹಾಕಿದೆ. ಆದರೆ, ನಾಮಫಲಕ ತುಕ್ಕು ಹಿಡಿಯದೇ ಹಾಗೆಯೆ ಉಳಿದಿದ್ದು, ಕನ್ನಡದ ಅಕ್ಷರ ಸಂಪೂರ್ಣ ಅಳಿಸಿ ಹೋಗಿದೆ. ಇದನ್ನು ಮತ್ತೆ ಸರಿಪಡಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಉಳುವಿಗೆ ಕೇವಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆ ಸಾಲದು. ಬದಲಾಗಿ ಎಲ್ಲಾ ಭಾಷೆ ಗೌರವಿಸುವ ಜತೆಗೆ ಕನ್ನಡ ಭಾಷೆ ಯನ್ನು ಪ್ರಧಾನ ಭಾಷೆಯನ್ನಾಗಿ ಪ್ರತಿ ಮನೆಯಲ್ಲಿ ನಿತ್ಯ ಬಳಸಿದರೆ ಕನ್ನಡ ಭಾಷೆ ತಾನಾಗಿಯೇ ಉಳಿಯುತ್ತದೆ ಎಂದರು.
ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿದ್ದಾರೆ. ತಾಲೂಕಿನಾಧ್ಯಂತ ಅನೇಕ ಆಟೋ ಸಂಘಟನೆಗಳಿದ್ದು, ಭಿನ್ನಾಭಿಪ್ರಾಯ ಬಿಟ್ಟು ಏಕಾಭಿಪ್ರಾಯ ಮೂಡಿಸಿಕೊಳ್ಳಬೇಕು. ಜತೆಗೆ ಆಟೋ ಚಾಲಕರು ಒಳ್ಳೆಯ ನಡವಳಿಕೆ ಮೈಗೂಡಿಸಿಕೊಂಡು ಜನರಲ್ಲಿ ವಿಶ್ವಾಸ ಗಳಿಸಬೇಕೆಂದು ಸಲಹೆ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ನಾಸಿಕ್ ಡೋಲ್ ಮತ್ತು ಡಿಜೆ ಮೂಲಕ ಕನ್ನಡ ನಾಡಿನ ಮಹತ್ವ ಸಾರುವ ಬಗ್ಗೆ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಜಿ.ಪ್ರಕಾಶ್ ವಹಿಸಿದ್ದರು. ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಎಂ.ಎಚ್.ಅಮರ್‌ನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ, ತಾಲೂಕು ಅಧ್ಯಕ್ಷ ಯು.ಬಿ.ನಾಗೇಶ್, ಕಾರ್ಯದರ್ಶಿ ಚಂದ್ರೇಶ್, ಆಟೋ ಚಾಲಕಿ ಬಾರತಿ ದಿನಕರ್ ಉಪಸ್ಥಿತರಿದ್ದರು.30 ಮೂಡಿಗೆರೆ 1ಎ ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು.